ಮಾರ್ಚ್‌ ನಲ್ಲಿ ದೇಶದ ಎಲ್‌ಪಿಜಿ ಬಳಕೆ ಶೇ.13 ಇಳಿಕೆ: ವರದಿ

ನವದೆಹಲಿ : ಮಧ್ಯಪ್ರಾಚ್ಯ ಸಂಘರ್ಷದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯದ ಪರಿಣಾಮ ಎಂಬಂತೆ, ಮಾರ್ಚ್‌ ತಿಂಗಳಲ್ಲಿ ಭಾರತದ ಅಡುಗೆ ಅನಿಲ ಬಳಕೆ ಪ್ರಮಾಣ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ.13ರಷ್ಟು ಇಳಿಕೆ ಕಂಡಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಮಾರ್ಚ್‌ನಲ್ಲಿ ದೇಶಾದ್ಯಂತ ಎಲ್‌ಪಿಜಿ ಬಳಕೆ ಪ್ರಮಾಣ 2.379 ದಶಲಕ್ಷ ಟನ್‌ನಷ್ಟಿದ್ದರೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಇದು 2.729 ದಶಲಕ್ಷ ಟನ್ ಆಗಿತ್ತು. ಹೊರ್ಮುಜ್‌ ಜಲಸಂಧಿಯಲ್ಲಿ ನೌಕೆಗಳ ಸಂಚಾರಕ್ಕೆ ನಿರ್ಬಂಧವಿದ್ದದ್ದು ಹಾಗೂ ಸಂಘರ್ಷ ತೀವ್ರಗೊಂಡಿದ್ದ ಕಾರಣ ಸೌದಿ ಅರೇಬಿಯಾ ಹಾಗೂ ಯುಎಇಯಿಂದ ಎಲ್‌ಪಿಜಿ ಸಾಗಣೆಗೆ ಅಡ್ಡಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರವು ಹೋಟೆಲ್, ಕೈಗಾರಿಕೆಗಳು ಸೇರಿದಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಗೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿ, ಗೃಹಬಳಕೆಗೆ ಲಭ್ಯವಾಗುವಂತೆ ಮಾಡಿದ್ದೇ ಬಳಕೆಯ ಪ್ರಮಾಣ ಕುಸಿಯಲು ಕಾರಣ ಎಂದು ಹೇಳಲಾಗಿದೆ.

ಮಾರ್ಚ್‌ನಲ್ಲಿ ಗೃಹಬಳಕೆದಾರರಿಗೆ ಸಿಲಿಂಡರ್‌ ಮಾರಾಟ ಶೇ.8.1 ಇಳಿಕೆಯಾಗಿದ್ದರೆ(2.219 ದಶಲಕ್ಷ ಟನ್), ವಾಣಿಜ್ಯ ಬಳಕೆದಾರರಿಗೆ ಮಾರಾಟ ಶೇ.48ರಷ್ಟು ಕಡಿತಗೊಳಿಸಲಾಗಿತ್ತು.

error: Content is protected !!