ಬೆಂಗಳೂರು: ಜಾಗತಿಕ ತಂತ್ರಜ್ಞಾನ ದೈತ್ಯ ‘ಮೆಟಾ’ (Meta) ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ತೀವ್ರ ಆಘಾತ ನೀಡಿದೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (Work From Home) ಆದೇಶ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಸುಮಾರು 8,000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಗೇಟ್ ಪಾಸ್ ನೀಡಿದೆ. ಕಂಪನಿಯ ಈ ದಿಢೀರ್ ನಿರ್ಧಾರವು ಐಟಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಚೇರಿಯಲ್ಲಿ ಗದ್ದಲ ತಪ್ಪಿಸಲು ಮ್ಯಾನೇಜ್‌ಮೆಂಟ್ ತಂತ್ರ?
ಉದ್ಯೋಗಿಗಳನ್ನು ಕಚೇರಿಗೆ ಕರೆಯಿಸಿ ವಜಾಗೊಳಿಸಿದರೆ ಆವರಣದಲ್ಲಿ ಪ್ರತಿಭಟನೆ ಅಥವಾ ಗದ್ದಲ ಸೃಷ್ಟಿಯಾಗಬಹುದು, ಇಲ್ಲ ಭದ್ರತಾ ಸಮಸ್ಯೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಮೆಟಾ ಆಡಳಿತ ಮಂಡಳಿ ಈ ತಂತ್ರ ಮಾಡಿದೆ ಎಂದು ಹೇಳಲಾಗುತ್ತಿದೆ. ಮೊದಲು ಎಲ್ಲರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಇಮೇಲ್ ಕಳುಹಿಸಿ, ಆ ಬಳಿಕ ಅವರು ಕಚೇರಿಯಿಂದ ದೂರವಿದ್ದಾಗಲೇ ಕೆಲಸದಿಂದ ತೆಗೆದುಹಾಕಿರುವ ಡಿಜಿಟಲ್ ನೋಟಿಸ್ (Pink Slip) ತಲುಪಿಸಲಾಗಿದೆ.
ದಿಢೀರ್ ಲೇ-ಆಫ್‌ಗೆ ಕಾರಣವೇನು?
ಕೋವಿಡ್ ಸಾಂಕ್ರಾಮಿಕದ ನಂತರ ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಏರುಪೇರು ಮತ್ತು ವೆಚ್ಚ ಕಡಿತಕ್ಕೆ (Cost-cutting) ಕಂಪನಿ ಮುಂದಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನೇತೃತ್ವದಲ್ಲಿ ಸಂಸ್ಥೆಯ ಪುನರ್ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ದಕ್ಷತೆ ಹೆಚ್ಚಿಸುವ ಹೆಸರಿನಲ್ಲಿ ಈ ಹಠಾತ್ ಕ್ರಮ ಕೈಗೊಳ್ಳಲಾಗಿದೆ.
ಐಟಿ ವಲಯದಲ್ಲಿ ಹೆಚ್ಚಿದ ಆತಂಕ
ಒಂದೆಡೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹಾವಳಿ ಹೆಚ್ಚಾಗುತ್ತಿರುವುದು ಮತ್ತು ಇನ್ನೊಂದೆಡೆ ಪ್ರಮುಖ ಟೆಕ್ ಕಂಪನಿಗಳು ಸತತವಾಗಿ ಉದ್ಯೋಗ ಕಡಿತದ ಹಾದಿ ಹಿಡಿದಿರುವುದು ಸಾಫ್ಟ್‌ವೇರ್ ಉದ್ಯೋಗಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಚೇರಿಗೆ ಬಾರದಂತೆ ತಡೆದು, ರಿಮೋಟ್ ಆಗಿ ಲಾಗ್-ಇನ್ ಆಗಿರುವಾಗಲೇ ಇಮೇಲ್ ಮೂಲಕ ಕೆಲಸದಿಂದ ಕಿತ್ತೊಗೆಯುವ ಈ ‘ಸೈಲೆಂಟ್ ಲೇ-ಆಫ್’ ಸಂಸ್ಕೃತಿ ಈಗ ಕಾರ್ಪೊರೇಟ್ ಜಗತ್ತಿನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ).
