ಕಲ್ಪತರು ನಾಡಿಗೆ ವರುಣನ ಕಂಟಕ: ತುಮಕೂರಿನಲ್ಲಿ ಮುಂದಿನ 4 ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆಯ ಸೂಚನೆ

ತುಮಕೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ (Yellow Alert) ಮುನ್ಸೂಚನೆ ನೀಡಿದೆ. ಜಿಲ್ಲಾದ್ಯಂತ ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಬಿರುಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

40 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ:
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಳೆಯ ಸಮಯದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ, ಕುಣಿಗಲ್ ಹಾಗೂ ತಿಪಟೂರು ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು ಸಹಿತ ಆರ್ಭಟ ಜೋರಾಗಿರಲಿದೆ ಎಂದು ತಿಳಿಸಲಾಗಿದೆ.

ರೈತರು ಮತ್ತು ಸಾರ್ವಜನಿಕರಿಗೆ ಜಿಲ್ಲಾಡಳಿತದ ಎಚ್ಚರಿಕೆ:

ದಿಢೀರ್ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಕೂಡ ಸೂಚನೆ ನೀಡಿದೆ.

ಮರಗಳ ಕೆಳಗೆ ನಿಲ್ಲಬೇಡಿ: ಬಿರುಗಾಳಿ ಬೀಸುವಾಗ ಹಳೆಯ ಕಟ್ಟಡಗಳು ಅಥವಾ ದಾರಿ ಬದಿಯ ದೊಡ್ಡ ಮರಗಳ ಕೆಳಗೆ ಆಶ್ರಯ ಪಡೆಯಬಾರದು.
ವಿದ್ಯುತ್ ಕಂಬಗಳಿಂದ ದೂರವಿರಿ: ಗಾಳಿ-ಮಳೆಗೆ ವಿದ್ಯುತ್ ತಂತಿಗಳು ತುಂಡುಬೀಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ಮಕ್ಕಳು ವಿದ್ಯುತ್ ಕಂಬಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು.
ರೈತರಿಗೆ ಸಲಹೆ: ತೋಟಗಾರಿಕೆ ಬೆಳೆಗಳು ಹಾಗೂ ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ರೈತ ಬಾಂಧವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.

ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಡೆಗಳಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರು ಜಾಗರೂಕರಾಗಿರಲು ಮಹಾನಗ ಪಾಲಿಕೆ ಅಧಿಕಾರಿಗಳು ಕೂಡ ಮನವಿ ಮಾಡಿದ್ದಾರೆ.

ವರದಿ : ನಾಗರಾಜ್ (ಕೆ.ಕಲ್ಲಹಳ್ಳಿ)

error: Content is protected !!