ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮೇ 28) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿವೆ. ಕಾಂಗ್ರೆಸ್ ಹೈಕಮಾಂಡ್‌ನ ಆಂತರಿಕ ಒಪ್ಪಂದದ ಸೂತ್ರದನ್ವಯ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಆಪ್ತ ಮೂಲಗಳು ಬಹಿರಂಗಪಡಿಸಿವೆ.
ಬೆಳಗಿನ ಉಪಹಾರ ಸಭೆಯಲ್ಲಿ ಅಂತಿಮ ತೀರ್ಮಾನ?ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆ ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಪ್ರಮುಖ ನಾಯಕರಿಗಾಗಿ ‘ಬ್ರೇಕ್ ಫಾಸ್ಟ್ ಮೀಟಿಂಗ್’ (ಉಪಹಾರ ಸಭೆ) ಕರೆದಿದ್ದಾರೆ. ಈ ಸಭೆಯಲ್ಲಿ ತಮ್ಮ ರಾಜೀನಾಮೆಯ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿ, ಇಡೀ ಸಚಿವ ಸಂಪುಟದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮುಂದಿನ ಸಿಎಂ ಯಾರು..?
ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೊಸ ಸರ್ಕಾರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಆಲೋಚನೆಯೂ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಭರವಸೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಉಸ್ತುವಾರಿ ಭೇಟಿ:
ಬೆಳವಣಿಗೆಗಳ ಉಸ್ತುವಾರಿ ವಹಿಸಲು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ನಾಯಕರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಉಭಯ ನಾಯಕರೊಂದಿಗೆ ಸಂಧಾನದ ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ 24 ಗಂಟೆಗಳು ಕರ್ನಾಟಕದ ಆಡಳಿತ ಚುಕ್ಕಾಣಿ ಯಾರ ಕೈಗೆ ಸೇರಲಿದೆ ಎಂಬುದನ್ನು ನಿರ್ಧರಿಸಲಿವೆ.
ನಾಗರಾಜ್ (ಕೆ.ಕಲ್ಲಹಳ್ಳಿ)
