ಕೂಲಿ ಮಾಡಿ ಕಟ್ಟಿದ ಹಣಕ್ಕಾಗಿ ಸಾರ್ವಜನಿಕರ ಪರದಾಟ; ಗುಡಿಬಂಡೆಯಲ್ಲಿ ಆತಂಕ
ಗುಡಿಬಂಡೆ:- ತೆಲುಗು ಜೂನಿಯರ್ ಎನ್ಟಿಆರ್ ನಟಿಸಿದ ‘ಜನತಾ ಗ್ಯಾರೇಜ್’ ಸಿನಿಮಾದಲ್ಲಿ ‘ಇಕ್ಕಡ ಅನ್ನಿ ರಿಪೇರಿಲು ಚೇಯ್ಯಬಡುನು’ ಎಂಬ ಪಂಚಿಂಗ್ ಡೈಲಾಗ್ ಮಾದರಿಯಲ್ಲೇ, ಜನತಾ ಇಂಡಿಯಾ ವೆಂಚರ್ಸ್ನಲ್ಲಿ ಎಲ್ಲಾ ರೀತಿಯ ಲಕ್ಕಿ ಡ್ರಾಗಳು ಲಭ್ಯ, ಮನೆಗೆ ಬೇಕಾದ ಪ್ರತಿಯೊಂದು ಗೃಹಬಳಕೆ ವಸ್ತುಗಳನ್ನು ಗೆಲ್ಲಬಹುದು ಎಂಬ ಆಕರ್ಷಕ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ಕೊನೆಗೆ ಹಣ ವಾಪಸ್ ನೀಡದೆ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತುಮಕೂರು ನಿವಾಸಿ ಫಾರೂಕ್ ಪಾಷಾ ಎಂಬುವವರು ಕಳೆದ ಎರಡುವರೆ ವರ್ಷಗಳಿಂದ ಗುಡಿಬಂಡೆಯಲ್ಲಿ ಜನತಾ ಇಂಡಿಯಾ ವೆಂಚರ್ಸ್ ಹೆಸರಿನಲ್ಲಿ ವಿವಿಧ ಸೀಸನ್ಗಳ ಆಧಾರದ ಮೇಲೆ ಮಾಸಿಕ ಹಾಗೂ ನಿಯತಕಾಲಿಕ ಲಕ್ಕಿ ಡ್ರಾ ಯೋಜನೆಗಳನ್ನು ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಇದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯ ಸಿರಾ ತಾಲೂಕಿನಲ್ಲಿಯೂ ಲಕ್ಕಿ ಡ್ರಾ ಯೋಜನೆ ನಡೆಯುತ್ತಿತ್ತು. ಯೋಜನೆಯ ಮೇಲೆ ನಂಬಿಕೆ ಇಟ್ಟ ಸಾರ್ವಜನಿಕರು ತಮ್ಮ ದುಡಿಮೆಯ ಹಣವನ್ನು ಹಂತ ಹಂತವಾಗಿ ಪಾವತಿಸಿದ್ದರು.
ಸಿರಾ ತಾಲೂಕಿನ ಜನತಾ ಇಂಡಿಯಾ ವೆಂಚರ್ಸ್ ಲಕ್ಕಿ ಡ್ರಾ ಯೋಜನೆಗೆ ಸೇರಿದ್ದ ಸಾರ್ವಜನಿಕರು ಸಂಪೂರ್ಣ ಹಣ ಪಾವತಿಸಿದ್ದರೂ ಕಳೆದ ಎರಡು ತಿಂಗಳಿಂದ ಡ್ರಾ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಹಣದ ಬಗ್ಗೆ ವಿಚಾರಿಸಲು ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಕಟ್ಟಿದ ಹಣವನ್ನು ಮರಳಿಸುವ ಬಗ್ಗೆಯೂ ಯಾವುದೇ ಉತ್ತರ ನೀಡುತ್ತಿಲ್ಲ. ಇದರಿಂದ ಹಣ ಪಾವತಿಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಣ ವಾಪಸ್ ಪಡೆಯಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಿರಾ ತಾಲೂಕಿನ ಸಾರ್ವಜನಿಕರು ಗುಡಿಬಂಡೆಗೆ ಹುಡುಕಿಕೊಂಡು ಬಂದಿದ್ದಾರೆ. ಹಣ ಕಟ್ಟಿರುವ ಕಾರ್ಡ್ನಲ್ಲಿ ಗುಡಿಬಂಡೆ ಬಾಬುಜಿ ನಗರದ ಬಿ ಬ್ಲಾಕ್ ವಿಳಾಸ ನಮೂದಿಸಿರುವುದರಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮ ಹಣವನ್ನು ಕಟ್ಟಿಸಿಕೊಂಡು ಈಗ ಮರಳಿಸದೆ ಅನ್ಯಾಯ ಮಾಡಿದ್ದಾರೆ. ಹಣ ಕೇಳಲು ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು.
ಗುರುವಾರ ಗುಡಿಬಂಡೆಯಲ್ಲಿಯೂ ಲಕ್ಕಿ ಡ್ರಾ ನಡೆಯಬೇಕಿತ್ತು. ಆದರೆ, ಯಾವುದೇ ಡ್ರಾ ನಡೆಸದಿರುವುದು ಹಣ ಕಟ್ಟಿದ್ದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಸಿರಾ ತಾಲೂಕಿನ ಜನರಿಗೆ ಹಣ ವಾಪಸ್ ಸಿಗದಿರುವ ವಿಚಾರ ತಿಳಿದಿದ್ದರಿಂದ ಗುಡಿಬಂಡೆಯ ಸಾರ್ವಜನಿಕರು ಕೂಡ ತಮ್ಮ ಹಣದ ಬಗ್ಗೆ ಭಯಗೊಂಡರು.
ತಾವು ಕೂಲಿ ಕೆಲಸ ಮಾಡಿ, ದಿನದ ದುಡಿಮೆಯಿಂದ ಸ್ವಲ್ಪಸ್ವಲ್ಪ ಹಣ ಉಳಿಸಿ ಲಕ್ಕಿ ಡ್ರಾ ಯೋಜನೆಗೆ ಕಟ್ಟಿದ್ದೇವೆ. ಇದೀಗ ಡ್ರಾ ನಡೆಯುತ್ತಿಲ್ಲ, ಹಣವೂ ವಾಪಸ್ ಸಿಗುತ್ತಿಲ್ಲ. ನಮ್ಮ ಕುಟುಂಬದ ನಿರ್ವಹಣೆಗೆ ಬೇಕಾದ ಹಣವನ್ನು ಈ ಯೋಜನೆಗೆ ಕಟ್ಟಿದ್ದೇವೆ. ನಮ್ಮ ಹಣ ನಮಗೆ ಮರಳಿಸಬೇಕು ಎಂದು ಸಾರ್ವಜನಿಕರು ಫಾರೂಕ್ ಪಾಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಕಿ ಡ್ರಾ ನಡೆಯದಿರುವುದು ಹಾಗೂ ಹಣ ವಾಪಸ್ ಸಿಗದಿರುವ ವಿಚಾರದಿಂದ ಸ್ಥಳದಲ್ಲಿ ಸಾರ್ವಜನಿಕರ ಗುಂಪು ಹೆಚ್ಚಾಯಿತು. ಹಣ ಕಟ್ಟಿದವರು ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರ ತಿಳಿದ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿತು.
ತಮ್ಮ ಕಷ್ಟದ ದುಡಿಮೆಯ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿಂದ ಬಂದಿದ್ದ ಸಾರ್ವಜನಿಕರು, ಹಣ ಸಿಗದಿರುವುದರಿಂದ ತೀವ್ರ ಆತಂಕಕ್ಕೆ ಒಳಗಾದರು. ಕೂಲಿ ಮಾಡಿ ಕಟ್ಟಿದ ಹಣ ಕಳೆದುಕೊಂಡ ನೋವಿನಿಂದ ಕೆಲವರು ಕಣ್ಣೀರು ಹಾಕಿದ ದೃಶ್ಯ ಕಂಡುಬಂದಿತು.
ಲಕ್ಕಿ ಡ್ರಾ ಯೋಜನೆಗಳ ಮೇಲೆ ನಂಬಿಕೆ ಇಟ್ಟು ಹಣ ಕಟ್ಟುವ ಸಾರ್ವಜನಿಕರ ಹಣದ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಹಣ ಸಂಗ್ರಹಿಸಿದವರು ಸಾರ್ವಜನಿಕರಿಗೆ ಹಣ ಮರಳಿಸದಿದ್ದರೆ, ಕಷ್ಟಪಟ್ಟು ದುಡಿದ ಬಡವರ ಸ್ಥಿತಿ ಏನು? ತಮ್ಮ ಹಣವನ್ನು ಮರಳಿ ಪಡೆಯಲು ಸಾರ್ವಜನಿಕರು ಯಾರ ಬಳಿ ಹೋಗಬೇಕು? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನಿಗದಿತ ಅವಧಿಯಲ್ಲಿ ಡ್ರಾ ನಡೆಸದೆ, ಹಣ ಮರಳಿಸದಿರುವ ಆರೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು. ಹಣ ಪಾವತಿಸಿದ ಸಾರ್ವಜನಿಕರಿಗೆ ಅವರ ಹಣ ಮರಳಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ವರದಿ-ಜೆ ಎನ್ ಕೃಷ್ಣಾರೆಡ್ಡಿ
