ಮುಂಗಾರು ಮಳೆ ಕೊರತೆಯಾಗಿದ್ದು, ಬೆಳೆಗಳು ಒಣಗಿಹೋಗಿವೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಾಳಗಿ ತಾಲೂಕುವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಜುಲೈ 13 ರಂದು ಬೃಹತ್ ಪ್ರತಿಭಟನೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ಮನವಿ ಮಾಡಿದ್ದಾರೆ.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಳಗಿ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಉದ್ದು, ಹೆಸರು, ಸೋಯಾ, ತೊಗರಿ ಸೇರಿದಂತೆ ಅನೇಕ ಬಗೆಯ ಬಿತ್ತನೆ ಕ್ಷೇತ್ರ ಕ್ಷೀಣಿಸಿದೆ. ಬಿತ್ತನೆ ಮಾಡಿದ ಹೆಸರು, ಉದ್ದು ಬೆಳೆ ರೈತರು ಹರಗುತ್ತಿದ್ದಾರೆ. ಬೆಳೆ ಇರುವ ಹೊಲಗಳಲ್ಲಿ ಅರ್ಧದಷ್ಟು ಬೆಳೆ ಹಾನಿಯಾಗಿದೆ. ತೊಗರಿ ಬಿತ್ತನೆ ಮಾಡಲಾಗದೆ ರೈತರು ಚಡಪಡಿಸುತ್ತಿದ್ದಾರೆ. ತೊಗರಿ ಬಿತ್ತನೆ ಮಾಡುತ್ತೇವೊ ಇಲ್ಲವೊ ಎಂದು ರೈತರಲ್ಲಿ ಆತಂಕ ಮನೆ ಮಾಡಿದೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ತೊಗರಿ ಬೆಳೆಯು ಹಾನಿಯಾಗುತ್ತದೆ. ಉದ್ದು, ಹೆಸರು, ತೊಗರಿ ಬೆಳೆಗಳು ಕಾಯಿಯಾಗದೆ ನಷ್ಟವಾಗುತ್ತದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಬೆಳೆ ಹಾನಿಯ ಕುರಿತು ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾರ್ಗಸೂಚಿಯ ಪ್ರಕಾರ ಕಾಳಗಿ ತಾಲೂಕುವನ್ನು ಬರಗಾಲ ಎಂದು ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆಯಲ್ಲಿ ಪೂಜ್ಯರಾದ ಶ್ರೀ ರೇವಣಸಿದ್ದ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯರು, ಶ್ರೀ ರೇವಣಸಿದ್ದ ಶರಣರು, ಸಾಮಾಜಿಕ ಹೋರಾಟಗಾರ ಮೋಹನ ಚಿನ್ನ, ಸುಂದರ ಡಿ ಸಾಗರ, ಕರಣ ರಾಜಾಪುರ, ಪವನ ಚಿನ್ನ, ಅವಿನಾಶ ಗುತ್ತೇದಾರ, ಮಲ್ಲಿಕಾರ್ಜುನ ಪಾಟೀಲ, ಶಿವು ಸಾಲಿಮಠ, ರಮೇಶ ಹೆಬ್ಬಾಳ, ಜಗನ್ನಾಥ ಸೇರಿದಂತೆ ಅನೇಕರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ
