ಮದುವೆ ತಪ್ಪಿಸಲು ತಲೆ ಬೋಡಿಸಿಕೊಂಡ ಯುವತಿ…

ಅಮ್ಮನ ಮದುವೆ ಪ್ಲ್ಯಾನ್‌ಗೆ ಮಗಳ ಮಾಸ್ಟರ್ ಸ್ಟ್ರೋಕ್; ಹುಡುಗ ಬರ್ತಿದ್ದಾನೆ ಅಂದಿದ್ದಕ್ಕೆ ತಲೆ ಬೋಳಿಸಿಕೊಂಡ ಯುವತಿ
ನಮ್ಮ ಸಮಾಜದಲ್ಲಿ ಹೆಣ್ಣು ನೋಡುವ ಶಾಸ್ತ್ರ ಎಂದರೆ ಅದೊಂದು ದೊಡ್ಡ ಸಂಭ್ರಮ.

ಗಂಡಿನ ಕಡೆಯವರು ಮನೆಗೆ ಬರುತ್ತಾರೆ ಎಂದ ತಕ್ಷಣ ಇಡೀ ಮನೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣ ಕಟ್ಟಿ ಸಜ್ಜುಗೊಳಿಸಲಾಗುತ್ತದೆ.

ಇನ್ನು ಹೆಣ್ಣುಮಗಳಿಗಂತೂ ಗಂಡಿನವರು ಮೊದಲ ನೋಟದಲ್ಲೇ ಫಿದಾ ಆಗಿಬಿಡಬೇಕು ಎಂದು ಬ್ಯೂಟಿ ಪಾರ್ಲರ್‌ಗೆ ಕರೆದುಕೊಂಡು ಹೋಗಿ, ರೇಷ್ಮೆ ಸೀರೆ ಉಡಿಸಿ, ಮಲ್ಲಿಗೆ ಹೂ ಮುಡಿಸಿ ಅಪ್ಸರೆಯಂತೆ ಸಿಂಗರಿಸುವುದು ವಾಡಿಕೆ.

ಆದರೆ, ಇಲ್ಲೊಬ್ಬ ಕಿಲಾಡಿ ಯುವತಿ ತನ್ನ ಮದುವೆ ಮುರಿಯಲು ಮಾಡಿರುವ ಪ್ಲ್ಯಾನ್ ಕೇಳಿದರೆ ನೀವು ಬೆರಗಾಗುವುದು ಗ್ಯಾರಂಟಿ.

ಅಂದವಾಗಿ ಕಂಡರೆ ತಾನೇ ಒಪ್ಪೋದು?

ಮನೆಯಲ್ಲಿ ಅಮ್ಮ “ನಾಳೆ ನಿನ್ನ ನೋಡೋಕೆ ಗಂಡಿನ ಕಡೆಯವರು ಬರ್ತಾರೆ, ಚೆನ್ನಾಗಿ ರೆಡಿಯಾಗಿರಮ್ಮ” ಎಂದು ಹೇಳಿದ್ದೇ ತಡ, ಈಕೆ ಇಡೀ ಕುಟುಂಬಕ್ಕೇ ಬಿಗ್ ಶಾಕ್ ನೀಡಿದ್ದಾಳೆ. ಸಾಮಾನ್ಯವಾಗಿ ಹುಡುಗಿಯರು ಗಂಡು ನೋಡಲು ಬರುವಾಗ ಮತ್ತಷ್ಟು ಸುಂದರವಾಗಿ ಕಾಣಲು ಬಯಸುತ್ತಾರೆ.

ಆದರೆ ಈ ಯುವತಿ, “ನಾನು ಚೆನ್ನಾಗಿ ಕಂಡರೆ ಅಲ್ವಾ ಆ ಹುಡುಗ ನನ್ನ ಒಪ್ಪೋದು? ಕಾಣದಿದ್ದರೆ ಮುಗಿಯಿತು ಕಥೆ” ಎಂದು ಫನ್ನಿ ಐಡಿಯಾ ಮಾಡಿದ್ದಾಳೆ. ಅಮ್ಮ ಮದುವೆಗೆ ರೆಡಿಯಾಗು ಎಂದಿದ್ದಕ್ಕೆ, ಈಕೆ ನೇರವಾಗಿ ಹೋಗಿ ದೇವಸ್ಥಾನದಲ್ಲಿ ಮುಡಿ ಕೊಡುವಂತೆ ತನ್ನ ಇಡೀ ತಲೆಯನ್ನು ಬೋಳಿಸಿಕೊಂಡು (ಗುಂಡು ಹೊಡಿಸಿಕೊಂಡು) ಬಂದಿದ್ದಾಳೆ.
ನಗುತ್ತಲೇ ಮುಡಿ ಕೊಟ್ಟ ಯುವತಿ

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಕ್ಷೌರಿಕರು ತಲೆಯ ಕೂದಲನ್ನು ಪೂರ್ತಿಯಾಗಿ ತೆಗೆಯುತ್ತಿದ್ದರೂ ಆ ಯುವತಿ ಚೂರೂ ಬೇಸರ ಮಾಡಿಕೊಳ್ಳದೆ, ಫುಲ್ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡುತ್ತಾ ನಕ್ಕಿದ್ದಾಳೆ.

ಇಂಟರ್ನೆಟ್‌ನಲ್ಲಿ ವೈರಲ್‌ ಆಗಿರುವ ಈ ವಿಡಿಯೋಗೆ, “ಅಮ್ಮ ನನಗೆ ಮದುವೆಗೆ ಪ್ಲ್ಯಾನ್ ಮಾಡ್ತಿದ್ದಳು, ಅದಕ್ಕೆ ಇದು ನನ್ನ ಕಡೆಯಿಂದ ಮಾಸ್ಟರ್ ಪ್ಲ್ಯಾನ್” ಎಂದು ಬರೆಯಲಾಗಿದೆ.
ಇದು ‘ನೆಕ್ಸ್ಟ್ ಲೆವೆಲ್’ ಐಡಿಯಾ ಎಂದ ನೆಟ್ಟಿಗರು

ಮದುವೆ ಇಷ್ಟವಿಲ್ಲದಿದ್ದರೆ ಮನೆಯವರ ಜೊತೆ ಜಗಳ ಆಡುವುದನ್ನು ಅಥವಾ ಅತ್ತು ಗಲಾಟೆ ಮಾಡುವುದನ್ನು ನೋಡಿದ್ದೇವೆ. ಆದರೆ, ಮದುವೆ ಗಂಡು ತನ್ನನ್ನು ರಿಜೆಕ್ಟ್ ಮಾಡಲಿ ಎಂಬ ಒಂದೇ ಕಾರಣಕ್ಕೆ ಇಷ್ಟೊಂದು ಧೈರ್ಯ ಮಾಡಿ, ತಲೆ ಕೂದಲನ್ನೇ ತ್ಯಾಗ ಮಾಡಿದ ಹುಡುಗಿಯ ಐಡಿಯಾಕ್ಕೆ ಸೋಷಿಯಲ್ ಮೀಡಿಯಾ ಮಂದಿ ಬೆರಗಾಗಿದ್ದಾರೆ.

“ಮದುವೆ ತಪ್ಪಿಸಿಕೊಳ್ಳೋಕೆ ಹುಡುಗಿಯರು ಈ ಮಟ್ಟಿಗೂ ಯೋಚನೆ ಮಾಡ್ತಾರಾ?” ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

error: Content is protected !!