15 ಲಕ್ಷ ವೆಚ್ಚದ ಸಾರ್ವಜನಿಕ ಶೌಚಾಲಯ ಕಳಪೆ ಕಾಮಗಾರಿ; ಉದ್ಘಾಟನೆಗೂ ಮುನ್ನವೇ ಬಿರುಕು

ಗುಣಮಟ್ಟದ ತನಿಖೆಗೆ ಆರ್.ಡಿ. ಪೂಜಾರಿ ಒತ್ತಾಯ

ಅಫಜಲಪುರ, ಆ. 7: ಅಫಜಲಪುರ ಪಟ್ಟಣದ ವಾರ್ಡ್ ನಂ. 15ರ ಅಗ್ನಿಶಾಮಕ ಠಾಣೆ ಸಮೀಪ ಸುಮಾರು ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು ಒಂದು ವರ್ಷದ ಹಿಂದೆ ನಿರ್ಮಾಣಗೊಂಡ ಶೌಚಾಲಯ ಇದುವರೆಗೆ ಸಾರ್ವಜನಿಕ ಬಳಕೆಗೆ ಉದ್ಘಾಟನೆಗೊಂಡಿಲ್ಲ. ಆದರೆ ಕಟ್ಟಡದ ಗೋಡೆಗಳಲ್ಲಿ ಈಗಾಗಲೇ ಬಿರುಕುಗಳು ಕಾಣಿಸಿಕೊಂಡಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಈ ಕಾಮಗಾರಿಯಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಸಂಪೂರ್ಣ ಗುಣಮಟ್ಟದ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ತಾಲೂಕು ಅಧ್ಯಕ್ಷ ಆರ್.ಡಿ. ಪೂಜಾರಿ ಮಾತನಾಡಿ, “ಸಾರ್ವಜನಿಕರ ಹಣದಿಂದ ನಿರ್ಮಾಣವಾಗುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಉದ್ಘಾಟನೆಗೂ ಮುನ್ನವೇ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಅತ್ಯಂತ ಆತಂಕಕಾರಿ. ಸರ್ಕಾರ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ವರದಿ : ಸೈಫನ್ ಮುಲ್ಲಾ

error: Content is protected !!