ಯಾದಗಿರಿ: ಸುರಪುರ ತಾಲೂಕಿನ ದೇವಿಕೇರಾ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ಕಾರಿ ಸರ್ವೆ ನಂಬರ್ 30/ಅ ನಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸುರಪುರ ಉಪವಿಭಾಗದ ಡಿವೈಎಸ್ಪಿ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ರಾಮದ ಸರ್ವೆ ನಂ. 30/ಅ ರಲ್ಲಿ ಒಟ್ಟು 7 ಎಕರೆ 19 ಗುಂಟೆ ಸರ್ಕಾರಿ ಜಮೀನಿದ್ದು, ಅದರಲ್ಲಿ ಶ್ರೀಮತಿ ಕಮಲಮ್ಮ ಗಂಡ ತಿಮ್ಮಣ್ಣ ಬಡಿಗೇರ ಅವರಿಗೆ 3 ಎಕರೆ ಮಂಜೂರಾಗಿದೆ. ಉಳಿದ 4 ಎಕರೆ 19 ಗುಂಟೆ ಜಮೀನನ್ನು ಗ್ರಾಮದ ಸಾರ್ವಜನಿಕ ಶೌಚಾಲಯ ಹಾಗೂ ಇತರೆ ಸಾರ್ವಜನಿಕ ಕಾರ್ಯಗಳಿಗೆ ಬಳಸಿಕೊಳ್ಳತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ, ಉಳಿದ ಸಾರ್ವಜನಿಕ ಜಮೀನಿನ ಮೇಲೆ ಕಮಲಮ್ಮ ಹಾಗೂ ಅವರ ಅಳಿಯ ಸಾಯಿಬಣ್ಣ ಐಕೂರ್ ಅವರು ಅತಿಕ್ರಮಣ ಮಾಡಿ, ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸುತ್ತಾ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಮಾಜಿ ಸಚಿವರ ಹೆಸರು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಈ ಕುರಿತು ಈಗಾಗಲೇ ದಿನಾಂಕ 07-07-2026 ರಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಬರುವ ದಿನಾಂಕ 29-10-2026 ರೊಳಗೆ ನ್ಯಾಯಯುತ ಕ್ರಮ ಕೈಗೊಂಡು, ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ, ಸುರಪುರ ತಹಶೀಲ್ ಕಚೇರಿಗೆ ಬೀಗ ಮುದ್ರೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮನವಿ ಪತ್ರಕ್ಕೆ ದೇವಿಕೇರಾ ಗ್ರಾಮದ ಸಮಸ್ತ ಗ್ರಾಮಸ್ಥರು ಸಹಿ ಮಾಡಿದ್ದಾರೆ.
