ಗೋಣಗನೂರಿನಲ್ಲಿ ಭೀಕರ ಅಗ್ನಿ ಅವಘಡ ಶಾರ್ಟ್ ಸರ್ಕ್ಯೂಟ್‌ನಿಂದ 7 ಎಕರೆ ಕಬ್ಬಿನ ಬೆಳೆ ಭಸ್ಮ; ಪರಿಹಾರಕ್ಕೆ ರೈತರ ಆಗ್ರಹ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎನ್ನಲಾದ ಅಗ್ನಿ ಅವಘಡದಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಸೈಯದಸಾಬ್ ಸೈಯದ, ಬುಡನಸಾಬ್ ಸೈಯದ, ಸುಭಾನಲ್ಲ ಸೈಯದ ಹಾಗೂ ಕಾಶಿಂಸಾಬ್ ಸೈಯದ ಅವರಿಗೆ ಸೇರಿದ ಹೊಲಗಳಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗಿದೆ.

ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಗಾಳಿಯ ರಭಸಕ್ಕೆ ಬೆಂಕಿ ವೇಗವಾಗಿ ವ್ಯಾಪಿಸಿದೆ. ಪರಿಣಾಮ, ಹೊಲಗಳಲ್ಲಿ ಬೆಳೆದು ನಿಂತಿದ್ದ ಸುಮಾರು 7 ಎಕರೆ ಕಬ್ಬು ಸುಟ್ಟು ಕರಕಲಾಗಿದೆ.

ಸಾಲ-ಸೋಲ ಮಾಡಿ, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಬ್ಬು ಬೆಳೆದಿದ್ದ ರೈತರಿಗೆ ಈ ಘಟನೆ ಭಾರಿ ಆಘಾತ ನೀಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಬೆಳೆ ನಾಶದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ಅಪಾರ ಪ್ರಮಾಣದ ಕಬ್ಬಿನ ಬೆಳೆ ನಾಶವಾಗಿದೆ.

*ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ನೀಡಿ*

ಅಗ್ನಿ ಅವಘಡದಿಂದ ನಷ್ಟ ಅನುಭವಿಸಿರುವ ಸೈಯದಸಾಬ್ ಸೈಯದ, ಬುಡನಸಾಬ್ ಸೈಯದ, ಸುಭಾನಲ್ಲ ಸೈಯದ ಹಾಗೂ ಕಾಶಿಂಸಾಬ್ ಸೈಯದ ಅವರಿಗೆ ಸೇರಿದ ಹೊಲಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸುಟ್ಟುಹೋದ ಕಬ್ಬಿನ ಬೆಳೆಯ ನಿಖರ ನಷ್ಟದ ಅಂದಾಜು ಮಾಡಿ, ಅರ್ಹ ರೈತರಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ.

ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಇಂತಹ ಅಗ್ನಿ ಅವಘಡಗಳು ಆರ್ಥಿಕವಾಗಿ ದೊಡ್ಡ ಹೊಡೆತ ನೀಡುತ್ತವೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ, ಬೆಳೆ ನಷ್ಟಕ್ಕೆ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

error: Content is protected !!