ಅಥಣಿ: ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ಕಬ್ಬು ಗದ್ದೆಯಲ್ಲೇ ಒಣಗುತ್ತಿದ್ದರೂ ಸರ್ಕಾರ ಮತ್ತು ಕಾರ್ಖಾನೆಗಳಿಗೆ ರೈತರ ಸಂಕಷ್ಟ ಕೇಳಿಸುತ್ತಿಲ್ಲ ಎಂದು ಅಥಣಿ ಭಾಗದ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬು ಕಟಾವಿಗೆ ಸಿದ್ಧವಾಗಿದ್ದರೂ ಸಕ್ಕರೆ ಕಾರ್ಖಾನೆಗಳ ಆರಂಭದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕಾರ್ಖಾನೆ ಯಾವಾಗ ಶುರು? ಕಟಾವು ವೇಳಾಪಟ್ಟಿ ಏನು? ಸಾಗಣೆ ವ್ಯವಸ್ಥೆ ಹೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲದೇ ರೈತರು ಆತಂಕದಲ್ಲಿದ್ದಾರೆ. ಗದ್ದೆಯಲ್ಲಿ ಹೆಚ್ಚು ದಿನ ಕಬ್ಬು ಉಳಿದರೆ ಗುಣಮಟ್ಟ ಕುಸಿದು ನಷ್ಟವಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರಸಗೊಬ್ಬರ, ಕೂಲಿ, ನೀರಾವರಿ, ಔಷಧಿ, ಸಾಗಣೆ ವೆಚ್ಚ ಗಗನಕ್ಕೇರಿರುವಾಗ ಪ್ರಸ್ತುತ ಸಿಗುತ್ತಿರುವ ಬೆಲೆ ಸಾಕಾಗುತ್ತಿಲ್ಲ. ಹೀಗಾಗಿ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಬ್ಬು ಕೇವಲ ಬೆಳೆಯಲ್ಲ, ಅದು ಕುಟುಂಬದ ಬದುಕು, ಸಾಲ ತೀರಿಸುವ ಭರವಸೆ. ಸರ್ಕಾರ ಮತ್ತು ಕಾರ್ಖಾನೆ ಆಡಳಿತ ಮಂಡಳಿಗಳು 7 ದಿನದೊಳಗೆ ಕಾರ್ಖಾನೆ ಆರಂಭದ ದಿನಾಂಕ, ಕಟಾವು ವೇಳಾಪಟ್ಟಿ ಮತ್ತು ₹5500 ಬೆಲೆಯ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳೊಂದಿಗೆ ಸೇರಿ ಕಾನೂನುಬದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು *ಚಾಣಕ್ಯ ಪ್ರಭ* ಎಚ್ಚರಿಕೆ ನೀಡಿದ್ದಾರೆ.
ರೈತನ ಬೆವರಿಗೆ ನ್ಯಾಯ ಕೊಡಿ, ಕಬ್ಬಿಗೆ ₹5500 ನೀಡಿ ಎಂಬುದು ಅಥಣಿ-ಐಗಳಿ ಭಾಗದ ರೈತರ ಒಕ್ಕೊರಲ ಆಗ್ರಹ.
