ಬರಗಾಲದಲ್ಲೂ ಬಂಗಾರದಂತ ದಾಳಿಂಬೆ ಬೆಳೆದ ರೈತನಿಗೆ ಕಳ್ಳರ ಕಾಟ: 50 ಕೆಜಿ ದಾಳಿಂಬೆ ಕದಿಯುತ್ತಿದ್ದ ಖದೀಮರು ರೆಡ್‌ಹ್ಯಾಂಡ್!

ಗುಡಿಬಂಡೆ: ಬರಗಾಲದಲ್ಲೂ ಹನಿ ಹನಿ ನೀರುಣಿಸಿ, ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ದಾಳಿಂಬೆ ಫಸಲಿಗೆ ಕಳ್ಳರ ಕಣ್ಣು ಬಿದ್ದಿದೆ. ಕಾವಲು ಕುಳಿತು ಕಳ್ಳರನ್ನು ರೆಡ್‌ಹ್ಯಾಂಡಾಗಿ ಹಿಡಿದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.

ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಸಮೀಪದ ರಾಮಗಾನಹಳ್ಳಿ ಸರ್ವೆ ನಂ 43ರಲ್ಲಿ 2.20 ಎಕರೆ ಜಮೀನಿನಲ್ಲಿ ನಿಸ್ಸಾರ್ ಬಾಷಾ ಎಂಬ ರೈತ ದಾಳಿಂಬೆ ಬೆಳೆದಿದ್ದಾರೆ. ಮಳೆ ಕೈಕೊಟ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿದ್ದರೂ ಎದೆಗುಂದದ ರೈತ, ನಿತ್ಯ ಟ್ಯಾಂಕರ್ ಮೂಲಕ ನೀರು ತರಿಸಿ, ಲಕ್ಷಾಂತರ ರೂಪಾಯಿ ಸುರಿದು ಮಕ್ಕಳಂತೆ ಗಿಡಗಳನ್ನು ಪೋಷಿಸಿ ಸಮೃದ್ಧ ಫಸಲು ಬೆಳೆದಿದ್ದರು.

ಆದರೆ ಕಳೆದ ಎರಡು ತಿಂಗಳಿನಿಂದ ಗಿಡದಲ್ಲಿದ್ದ ಕಾಯಿಗಳು ನಿಗೂಢವಾಗಿ ಮಾಯವಾಗುತ್ತಿದ್ದವು. ಅನುಮಾನಗೊಂಡ ರೈತ ನಿಸ್ಸಾರ್ ಬಾಷಾ ತಾವೇ ಜಮೀನಿನಲ್ಲಿ ಕಾವಲು ಕಾಯಲು ನಿರ್ಧರಿಸಿದ್ದರು. ರಾತ್ರಿಯಿಡೀ ನಿದ್ದೆಗೆಟ್ಟು ಕಾವಲು ಕುಳಿತಿದ್ದಾಗ ಬೆಳಿಗ್ಗೆ 8.30ರ ಸುಮಾರಿಗೆ ಪಕ್ಕದ ಬಡಾವಣೆಯ ಕೆಲವರು ಜಮೀನಿಗೆ ನುಗ್ಗಿ ಬರೋಬ್ಬರಿ 50 ಕೆ.ಜಿ. ದಾಳಿಂಬೆ ಕಾಯಿಗಳನ್ನು ಚೀಲದಲ್ಲಿ ತುಂಬುತ್ತಿದ್ದರು. ತಕ್ಷಣ ಎಚ್ಚೆತ್ತ ರೈತ ಸ್ಥಳೀಯರ ನೆರವಿನಿಂದ ಕಳ್ಳರನ್ನು ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

“ಬರಗಾಲದಲ್ಲಿ ಬೋರ್‌ವೆಲ್ ಒಣಗಿದರೂ ಟ್ಯಾಂಕರ್ ನೀರು ಹಾಕಿ ಲಕ್ಷಾಂತರ ಸಾಲ ಮಾಡಿ ಬೆಳೆ ಉಳಿಸಿಕೊಂಡಿದ್ದೆ. ಕಷ್ಟಪಟ್ಟು ಬೆಳೆದ ಫಸಲನ್ನು ಹೀಗೆ ಕದ್ದರೆ ನಾವು ಬದುಕೋದು ಹೇಗೆ? ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ರೈತ ನಿಸ್ಸಾರ್ ಬಾಷಾ ಅಳಲು ತೋಡಿಕೊಂಡಿದ್ದಾರೆ.

ಸದ್ಯ ರೈತ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವರದಿ: ಜೆ.ಎನ್ ಕೃಷ್ಣಾರೆಡ್ಡಿ, ಗುಡಿಬಂಡೆ

error: Content is protected !!