ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ ತರುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ನಡೆಸಿದ ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು ಬಹಿರಂಗಪಡಿಸಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪೆಟ್ರೋಲ್ನಲ್ಲಿ(Petrol) ಎಥೆನಾಲ್ ಬಳಕೆ ಕುರಿತು ವ್ಯಾಪಕ ಗೊಂದಲ ಹಾಗೂ ಮಾಧ್ಯಮ ವರದಿಗಳು ಬಂದ ಹಿನ್ನೆಲೆಯಲ್ಲಿ, ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಒಟ್ಟು 63 ಇಂಧನ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಆರಂಭದಲ್ಲಿ ಇ-20 ಪರೀಕ್ಷೆಗಾಗಿ ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಲ್ಯಾಬ್ಗಳಿಗೆ ಕಳುಹಿಸಲಾಯಿತಾದರೂ ಅಲ್ಲಿ ಎಥೆನಾಲ್ ಪ್ರಮಾಣದ ನಿಖರ ಮಾಹಿತಿ ನೀಡಲು ಹಿಂದೇಟು ಹಾಕಲಾಯಿತು. ಹೀಗಾಗಿ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾದ 7 ಸ್ಯಾಂಪಲ್ಗಳ ಪೈಕಿ 5 ಸ್ಯಾಂಪಲ್ಗಳಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಇರುವುದು ದೃಢಪಟ್ಟಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಬರೋಬ್ಬರಿ ಶೇ. 31.02 ರಷ್ಟಿರುವುದು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದರು.
