ದೆಹಲಿ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ ಬೆನ್ನಲ್ಲೇ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಕುರಿತು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಸುಳಿವು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ನಾನೇ ಹೇಳುತ್ತಿದ್ದೇನೆ, ನಿಖಿಲ್ ಮುಂದೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಶಾಸಕರಾಗುವುದು ಒಂದೇ ಪ್ರಶ್ನೆಯಲ್ಲ. ಆತ ಯುವಕನಿದ್ದಾನೆ. ರಾಜ್ಯದ ಜವಾಬ್ದಾರಿ, ಪಕ್ಷವನ್ನು ಬೆಳೆಸುವುದಕ್ಕೆ ಅನುಭವ ಇದೆ. ಕುಟುಂಬದ ಹಿನ್ನೆಲೆ ಇದೆ. ಆತನಿಗೆ ಹೆಚ್ಚು ಹೊಣೆಗಾರಿಕೆ ಕೊಟ್ಟು ಪಕ್ಷವನ್ನು ಉಳಿಸಿ ಬೆಳೆಸುತ್ತೇವೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಲಿದ್ದಾರಂತೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವು ಈಗಾಗಲೇ ಕಾಂಗ್ರೆಸ್ನಿಂದ ದೂರ ಸರಿದಿದ್ದೇವೆ. ಅಮಿತ್ ಶಾ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆಗೇ ಮಾತುಕತೆ ನಡೆಸಲಿದ್ದೇವೆ. ಕೊನೆಯ ವರೆಗೂ ಎನ್ಡಿಎ ಜತೆಗೇ ಇರಲಿದ್ದೇವೆ ಎಂದು ತಿಳಿಸಿದರು.