ಚಂದ್ರಂಪಳ್ಳಿ ಜಲಾಶಯ ಹಾಗೂ ಚಿಂಚೋಳಿ ವನ್ಯ ಧಾಮಕ್ಕೆ ವೀರೇಂದ್ರ ಪಾಟೀಲ ಹಾಗೂ ವೈಜನಾಥ ಪಾಟೀಲ ಹೆಸರಿಡಲು ಸರಕಾರಕ್ಕೆ ಶರಣು ಪಾಟೀಲ ಮೋತಕಪಳ್ಳಿ ಮನವಿ

ಕರ್ನಾಟಕ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಚಿಂಚೋಳಿ ತಾಲೂಕೀನ ರಾಜಕೀಯ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಅವರ ಹಾಗೂ ಮಾಜಿ ಸಚಿವ ದಿವಂಗತ ವೈಜನಾಥ ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ವೀರಶೈವ ಲಿಂಗಾಯತ ಸಮಾಜದ ಈರ್ವರು ನಾಯಕರು ತಮ್ಮ ಜೀವಿತಾವಧಿಯಲ್ಲಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಕ್ರಾಂತಿಕಾರಕ ಕೆಲಸಗಳು ಮಾಡಿದ್ದು ನಾವ್ಯಾರು ಮರೆಯುವಂತಿಲ್ಲ, ಚಂಪ್ರಂಪಳ್ಳಿ ಯಿಂದ ಹಿಡಿದು ಹಾರಂಗಿ ವರೆಗೆ ಅನೇಕ ಜಲಾಶಯಗಳನ್ನು ನಿರ್ಮಾಣ ಮಾಡಿ ನೀರಾವರಿ ಕ್ರಾಂತಿ ಮಾಡಿ ರೈತರ ಬದುಕು ಹಸನಾಗಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಅವರಿಗೆ ಸಲ್ಲುತ್ತದೆ. ಹಾಗೂ ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟು ಹಿಂದುಳಿದಿದ್ದ ನಮ್ಮ ಭಾಗವನ್ನು ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಚಿಂಚೋಳಿ ಯಿಂದ ಹಿಡಿದು ದೆಹಲಿಯ ಜಂತರ್ ಮಂತರ್ ವರೆಗೆ ಹೋರಾಟ ಮಾಡಿ ಇವತ್ತಿನ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಇಡೀ ಜೀವಮಾನವನ್ನು ಮೀಸಲಿಟ್ಟ ಮಾಜಿ ಸಚಿವರು ದಿ. ವೈಜನಾಥ ಪಾಟೀಲರು ಅನ್ನುವದು ಯಾರು ಮರೆಯುವಂತಿಲ್ಲ.
ಇಬ್ಬರು ನಾಯಕರು ನಮ್ಮ ಚಿಂಚೋಳಿಯ ಹೆಮ್ಮೆಯಾಗಿದ್ದು, ಅವರ ಬದುಕು, ಹೋರಾಟ ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಇದೆ. ಈ ನಿಟ್ಟಿನಲ್ಲಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ ದಿ. ವೀರೇಂದ್ರ ಪಾಟೀಲ ಅವರ ಹೆಸರನ್ನು ಹಾಗೂ ಚಿಂಚೋಳಿ ವನ್ಯಧಾಮಕ್ಕೆ ದಿವಂಗತ ಶ್ರೀ ವೈಜನಾಥ ಪಾಟೀಲ ಅವರ ಹೆಸರನ್ನು ಇಡಲು ಅನುಮೋದನೆ ನೀಡಿ ಅಧಿಕೃತ ಘೋಷಣೆ ಮಾಡಿ, ನಮ್ಮ ತಾಲೂಕಿನ ಲಿಂಗಾಯತ ಸಮುದಾಯದ ಹೆಮ್ಮೆಯ ನಾಯಕರನ್ನು ಸ್ಮರಿಸುವ ಕೆಲಸ ಮಾಡಬೇಕೆಂದು ಚಿಂಚೋಳಿ ತಾಲೂಕಿನ ಜನತೆಯ ಪರವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಬಾವು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ, ಉಪ ಮುಖ್ಯಮಂತ್ರಿಗಳು ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವರಾದ ಡಿ. ಕೆ.ಶಿವಕುಮಾರ್ ಅವರಿಗೆ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಒತ್ತಾಯಿಸುತ್ತಾ, ಈ ನಿಟ್ಟಿನಲ್ಲಿ ಸರಕಾರ ಸಕಾರಾತ್ಮಕ ಹೆಜ್ಜೆ ಇಡುತ್ತದೆ ಎನ್ನುವ ಅಚಲ ನಂಬಿಕೆಯೊಂದಿಗೆ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದೆ ಎಂದು ಶರಣು ಪಾಟೀಲ ಮೋತಕಪಳ್ಳಿ, ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ಮನವಿ ಸಲ್ಲಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!