ಪ್ರತಿಯೊಂದು ಮಗುವು ಹುಟ್ಟಿನಿಂದ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಬಂದಿರುತ್ತದೆ – ಶಾಸಕ ಪ್ರಭು ಚೌಹಾಣ್

ಔರಾದ್ : ಪ್ರತಿಯೊಂದು ಮಗುವು ಹುಟ್ಟಿನಿಂದ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಬಂದಿರುತ್ತದೆ. ಅದನ್ನು ಗುರುತಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕ ಪೋಷಕರು ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.

 

ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಶಿಕ್ಷಣ, ಮನರಂಜನೆ ಹಾಗೂ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಜತೆಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರುತ್ತದೆ. ಇದರೊಂದಿಗೆ ಹೊಸದಾದ ಜೀವನ ಕೌಶಲ್ಯವನ್ನು ಹೊಂದಬಹುದಾಗಿದೆ ಎಂದರು.

 

ಗಡಿ ಭಾಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದರು ಸಹ ಶಾಲೆಯ ಸಿಬ್ಬಂದಿಗಳು ಅದನ್ನು ಬಳಸಿಕೊಳ್ಳಲು ವಿಫಲರಾಗಿದ್ದಾರೆ, ಶಾಲಾ ಪ್ರಾರಂಭೋತ್ಸವದಲ್ಲಿ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳಿಗೆ ಹಾಗೂ ಪಾಲಕರಿಗೆ ಸರ್ಕಾರಿ ಶಾಲೆಯ ಹಾಗೂ ಶಿಕ್ಷಣದ ಕುರಿತು ತಿಳಿ ಹೇಳಿ ಶಾಲಾ ದಾಖಲಾತಿ ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ, ಶಾಲೆಯಲ್ಲಿ ಸ್ವಚ್ಛತೆ, ಆಟದ ಮೈದಾನ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸದಾ ಬದ್ಧನಾಗಿರುವೆ ತಾಲೂಕಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದು ತಿಳಿಸಿದರು.

 

ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರವಾಗಿ ಕುಸಿದಿದ್ದು, ಸುಧಾರಣೆಗೆ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಮಕ್ಕಳ ಕಲಿಕಾ ಪ್ರಗತಿಗೆ ಇಲಾಖೆ ಯೋಜನೆ ರೂಪಿಸಬೇಕು. ಕೆಲ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಲ್ಲದಿದ್ದರೂ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಅಂತಹ ಶಾಲೆ ಶಿಕ್ಷಕರಿಗೆ ಬೇರೆಡೆ ನಿಯೋಜನೆ ಮಾಡುವಂತೆ ಸೂಚಿಸಿದರು.

 

ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ ನಾಯಕ ಅವರು ಮಾತನಾಡಿ ಶಿಕ್ಷಣದ ಮೂಲ ಉದ್ದೇಶ ಕೇವಲ ಓದು, ಬರಹ ಕಲಿಸುವುದು ಮಾತ್ರವಲ್ಲ. ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿರಂತರವಾಗಿ ಪ್ರೋತ್ಸಾಹಿಸುವುದಾಗಿದೆ ಎಂದು ತಿಳಿಸಿದರು.

ವಿವಿಧ ಶಾಲೆಯಿಂದ ಸುಮಾರು 38 ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ 80 ಸಾವಿರ ರೂಪಾಯಿ ನೀಡಿದರು.

 

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ ರಾಠೋಡ, ದೈಹಿಕ ಶಿಕ್ಷಣ ಪರಿವೀಕ್ಷಕ ಜೊಯಲ್ ಜಯರಾಜ್, ಪಪಂ ಸದಸ್ಯ ದಯಾನಂದ ಘೂಳೆ, ಸಂತೋಷ ಪೋಕಲವಾರ, ಸಂಜುಕುಮಾರ ವಡಿಯಾರ, ಗುಂಡಪ್ಪ ಮುದಾಳೆ, ಮುಖಂಡರಾದ ಶಿವರಾಜ ಅಲ್ಮಾಜೆ, ಕೇರಬಾ ಪವಾರ,ನೋಡಲ್ ಅಧಿಕಾರಿ ಸಂಜಯ ಮೇತ್ರೆ ವಿಶ್ವನಾಥ ಬಿರಾದಾರ, ಸಂಜೀವ ಮೇತ್ರೆ, ಬಸವರಾಜ ಪಾಟೀಲ್, ವಿಜಯಕುಮಾರ ನುದನೂರೆ, ಶಿಕ್ಷಕ ಬಾಲಾಜಿ ಅಮರವಾಡಿ, ಮಹಾದೇವ ಘೂಳೆ, ಬಲಭೀಮ ಕುಲಕರ್ಣಿ, ವೆಂಕಟ ಔತಾಡೆ, ರಮೇಶ ಢೋಣೆ, ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!