ಚಿತ್ತಾಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025-26ನೇ ಸಾಲಿಗೆ “ಸರಳ ಸಾಮೂಹಿಕ ವಿವಾಹ ಯೋಜನೆ” ಅಡಿಯಲ್ಲಿ ಸರಳ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಡಿ ಸ್ವಸಹಾಯ ಸಂಘಗಳು, ಧಾರ್ಮಿಕ ಟ್ರಸ್ಟ್‌ಗಳು, ವಕ್ಫ್‌ನಲ್ಲಿ ನೋಂದಾಯಿತ ಸಂಸ್ಥೆಗಳು, ಸ್ವಯಂ-ಸೇವಾ ಸಂಘಟನೆಗಳು ಅಥವಾ ವಕ್ಫ್ ನೋಂದಾಯಿತ ಖಾಸಗಿ ಆಯೋಜಕರು ಕನಿಷ್ಠ 10 ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸಿದರೆ, ಪ್ರತಿ ವಿವಾಹ ಜೋಡಿಗೆ ₹50,000 ಹಾಗೂ ಆಯೋಜಕರಿಗೆ ಪ್ರತಿ ಜೋಡಿಗೆ ₹5,000 ಆರ್ಥಿಕ ಪ್ರೋತ್ಸಾಹಧನ ನೀಡಲಾಗುವುದು ಎಂದು ಕಾಳಗಿ ತಾಲೂಕು ವಿಸ್ತಾರಣಾಧಿಕಾರಿ ಶೇಖ್ ಫಹೀಮುದ್ದೀನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ ಒಟ್ಟು 300 ಜೋಡಿಗಳ ಸರಳ ವಿವಾಹ ಗುರಿ ನಿಗದಿಪಡಿಸಲಾಗಿದ್ದು, ಅದರೊಳಗೆ ಚಿತ್ತಾಪುರ ತಾಲೂಕಿಗೆ 55 ಜೋಡಿಗಳ ಗುರಿ ನಿಗದಿಯಾಗಿದೆ.
ಚಿತ್ತಾಪುರ ತಾಲೂಕಿನ ವ್ಯಾಪ್ತಿಯಲ್ಲಿರುವ ಸ್ವಸಹಾಯ ಸಂಘಗಳು, ದೇವಸ್ಥಾನ ಟ್ರಸ್ಟ್‌ಗಳು, ಎನ್‌ಜಿಒಗಳು, ವಕ್ಫ್ ಬೋರ್ಡ್‌ನಲ್ಲಿ ನೋಂದಾಯಿತ ಟ್ರಸ್ಟ್‌ಗಳು, ಸಂಘಗಳು, ಸೊಸೈಟಿಗಳು, ವಕ್ಫ್ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದ ಜೋಡಿಗಳು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತಾರಣಾಧಿಕಾರಿ ಶೇಖ್ ಫಹೀಮುದ್ದೀನ್ ಅವರು, ತಾಲ್ಲೂಕಿನ ಎಲ್ಲಾ ಸಂಸ್ಥೆಗಳು ಮತ್ತು ಆಯೋಜಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ತಾಲ್ಲೂಕ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಸಾಮರ್ಥ್ಯ ಸೌಧ, ತಾಲ್ಲೂಕ ಪಂಚಾಯತ್ ಕಛೇರಿ, ಚಿತ್ತಾಪುರ – 585211
99725 54852 – 96634 13012
ವರದಿ ಮೊಹಮ್ಮದ್ ಅಲಿ ಚಿತ್ತಾಪುರ