ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗುರುರಾಜ್ ಸಲಹೆ

ಔರಾದ್ : ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್‌ಗಳು ಸಿಗುತ್ತಿರುವ ಪರಿಣಾಮ ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಇದರಿಂದ ಮಕ್ಕಳ ಪ್ರತಿಭೆಗೂ ಕುಂದು ಉಂಟಾಗುತ್ತಿದ್ದು, ಪೋಷಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ಗಳಿಂದ ದೂರ ಇಡಬೇಕೆಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗುರುರಾಜ್ ಪೋಷಕರಿಗೆ ಸಲಹೆ ನೀಡಿದರು.
ತಾಲೂಕಿನ ಸಂತಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಲೆಯಲ್ಲಿ ಮಂಗಳವಾರ ಕಲ್ಯಾಣ ಕಲ್ಯಾಣ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ, ಜಿಲ್ಲಾಡಳಿತ, ಜಿಪಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಂತಪೂರ, ಗ್ರಾಪಂ ಮತ್ತು ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೇ ಮುಳುಗುತ್ತಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ಚಿಂತನೆಯ ಸಾಮರ್ಥ್ಯ ಕುಸಿಯುತ್ತಿದೆ. ಎಲ್ಲದಕ್ಕೂ ಮೊಬೈಲ್ ಅವಲಂಬಿನೆಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಾಲಕರು ಮಕ್ಕಳಿಗೆ ಮೊಬೈಲ್ ನಿಂದ ದೂರವಿಡಬೇಕು ಎಂದು ಸಲಹೆ ನೀಡಿದರು.

ಸಿಡಿಪಿಒ ಇಮಲಪ್ಪ ಡಿ.ಕೆ ಮಾತನಾಡಿ, ಪಾಲಕರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಕಲಿಕೆಗೆ ಕೈಜೋಡಿಸುವ ಜೊತೆಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಅತಿ ಅವಶ್ಯ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳೊಂದಿಗೆ ಚಟುವಟಿಕೆಯ ಮೂಲಕ ಭಾಗವಹಿಸುವ ಮೂಲಕ ಮಕ್ಕಳ ಮನಸ್ಸನ್ನು ಗೆದ್ದು ಆಟ ಪಾಠ ಮಾಡಿಸಬೇಕು ಎಂದು ಹೇಳಿದರು. ಟಾಟಾ ಕಲಿಕಾ ಟ್ರಸ್ಟ್ ಜಿಲ್ಲಾ ಸಂಯೋಜಕಿ ಮಲ್ಲಮ್ಮ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಲಾಖೆಯ ಜತೆಗೆ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದರು.

ಪಿಡಿಒ ಸಂತೋಷ ಪಾಟೀಲ್ ಮಾತನಾಡಿದರು. ಗ್ರಾಪಂ‌ ಅಧ್ಯಕ್ಷೆ ಮಹಾದೇವಿ ಪಾಟೀಲ್, ಎಸಿಡಿಪಿಒ ಎಂ.ಡಿ ಖಲೀಲ್, ಗ್ರಾಪಂ‌ ಸದಸ್ಯ ಚಂದ್ರಕಾಂತ ಪಾಟೀಲ್, ಮೇಲ್ವಿಚಾರಕರಾದ ರಾಜೇಶ್ರೀ, ಶೋಭಾ ರಾಠೋಡ್, ವಿಜಯಲಕ್ಷ್ಮೀ ಸೇರಿದಂತೆ ಹೇಡಗಾಪೂರ, ಹೊಳಸಮುದ್ರ, ಔರಾದ್ ವಲಯದ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡರು.

ಗಮನ ಸೆಳೆದ ಬಾಲಮೇಳ

ಸಂತಪೂರನಲ್ಲಿ ಹೇಡಗಾಪೂರ ವಲಯದ ಅಂಗನವಾಡಿ ಮಕ್ಕಳಿಗಾಗಿ ಹಮ್ಮಿಕೊಂಡ ಬಾಲ‌ಮೇಳ ಕಾರ್ಯಕ್ರಮ ಗಮನ ಸೆಳೆಯಿತು. ಈ ವೇಳೆ ನಾನಾ ಅಂಗನವಾಡಿ ಕೇಂದ್ರದಿಂದ ವೇಷಭೂಷಣದಲ್ಲಿ ಆಗಮಿಸಿದ ಮಕ್ಕಳ ಪಾಲಕರೊಂದಿಗೆ ಕುಣಿದು ಕುಪ್ಪಳಿಸಿರುವುದು ಎಲ್ಲರ ಗಮನ ಸೆಳೆಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಾಲಕರು ಚಪ್ಪಾಳೆ ಹಾಕುವ ಮೂಲಕ ಹುರಿದುಂಬಿಸಿದರು.

ವರದಿ : ರಾಚಯ್ಯ ಸ್ವಾಮಿ

error: Content is protected !!