ಶ್ರೀರಾಮಪುರ : ಪೊಲೀಸ್ ಠಾಣಾ ಸರಹದ್ದಿನ ಸ್ವತಂತ್ರ ಪಾಳ್ಯದಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:16/10/2025 ರಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರ ಮಗಳು ಫಾರ್ಮಸಿ ಕಾಲೇಜ್ ವೊಂದರಲ್ಲಿ ಮೊದಲನೇ ವರ್ಷದ ವ್ಯಾಸಂಗ ಮಾಡುತ್ತಿದ್ದು, ಪಿರ್ಯಾದುದಾರರ ಮನೆಯ ಎದುರಗಡೆ ವಾಸವಿರುವ ಓರ್ವ ವ್ಯಕ್ತಿಯು ವಿದ್ಯಾದಿಯ ಮಗಳ ಸ್ನೇಹಿತನಾಗಿದ್ದು, ಹೀಗೆ ಸ್ವಲ್ಪ ದಿನಗಳ ಹಿಂದೆ ಪಿರ್ಯಾದಿಯ ಮಗಳನ್ನು ಮದುವೆಯಾಗುವಂತೆ ಎದುರುಗಡೆ ವಾಸವಿರುವ ವ್ಯಕ್ತಿ ಪೀಡಿಸುತ್ತಿದ್ದನು. ದಿನಾಂಕ:16/10/2025 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದುದಾರರ ಮಗಳು ಕಾಲೇಜ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ, ಜಕ್ಕರಾಯನಕೆರೆಯ ರೈಲ್ವೆ ಹಳಿ ಬಳಿ ಆಕೆಯನ್ನು ಉದ್ದೇಶಿಸಿ, ಎದುರುಗಡೆ ಮನೆ ವ್ಯಕ್ತಿಯು ಮದುವೆಯಾಗುವಂತೆ ಪೀಡಿಸಿದ. ಆಕೆಯು ನಿರಾಕರಸಿದ ಕಾರಣ ಎದುರುಗಡೆ ಮನೆ ವ್ಯಕ್ತಿಯು ತಾನು ಹೊಂದಿದ್ದ ಚೂಪಾದ ಆಯುಧದಿಂದ ಆಕೆಗೆ ಹೊಡೆದು, ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಮಾಡಿರುತ್ತಾನೆಂದು ಸಂಶಯ ವ್ಯಕ್ತಪಡಿಸಿ, ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಕೃತ್ಯ ನಡೆದ ಕೇವಲ 24 ಗಂಟೆಯೊಳಗೆ ಅಂದರೆ, ದಿನಾಂಕ:17/10/2025 ರಂದು ಮಧ್ಯಾಹ್ನ ಕೃತ್ಯವೆಸಗಿದ್ದ ವ್ಯಕ್ತಿ ಹಾಗೂ ಈ ಕೃತ್ಯವೆಸಗಿದ ನಂತರ ವ್ಯಕ್ತಿಗೆ ಆಶ್ರಯ ನೀಡಿದ ಮತ್ತೋರ್ವ ವ್ಯಕ್ತಿಯನ್ನು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಕಾಲೇಜ್ ವೊಂದರ ಬಳಿ ಕೃತ್ಯಕ್ಕೆ ಬಳಸಿದ್ದ ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ದೂರಿನಲ್ಲಿ ತಿಳಿಸಿರುವಂತೆ ಪಿರ್ಯಾದಿಯ ಮಗಳು ಮದುವೆಯಾಗಲು ತಿರಸ್ಕರಿಸಿದ್ದರಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಈ ಕಾರ್ಯಾಚರಣೆಯನ್ನು ಶ್ರೀ. ಬಿ.ಎಸ್. ನೇಮಗೌಡ, ಐ.ಪಿ.ಎಸ್. ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ಹೆಚ್. ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ನೇತೃತ್ವದಲ್ಲಿ ಪೂಣಚ್ಚ ಎನ್.ಎಂ. ಪೊಲೀಸ್ ಇನ್ಸ್‌ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ ರವರು ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು