ರಾಯಚೂರು, ಅ.20:
ಸುಧೀರ್ಘ 50 ವರ್ಷಗಳಿಂದ ರಂಗಭೂಮಿಯ ಸೇವೆಯಲ್ಲಿ ತೊಡಗಿಸಿಕೊಂಡು, ತಮ್ಮ ಬದುಕಿನ ಎಲ್ಲ ಕ್ಷಣವನ್ನೂ ಕಲೆಗೆ ಅರ್ಪಿಸಿರುವ ಸಿರವಾರದ 74 ವರ್ಷದ ಹಿರಿಯ ಕಲಾವಿದೆ ರತ್ನಮ್ಮ ಬಿ.ಎಸ್. ದೇಸಾಯಿ ಅವರಿಗೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಲಿ ಎನ್ನುವುದು ಕಲಾರಸಿಕರ ಆಶಯಾಗಿದೆ.
ಕಳೆದ ಹಲವು ದಶಕಗಳಿಂದ ರಾಜ್ಯದ ಅನೇಕ ಪ್ರತಿಷ್ಠಿತ ನಾಟಕ ಕಂಪನಿಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ರತ್ನಮ್ಮ ಅವರು, ತಮ್ಮ ಪ್ರತಿಭೆಯಿಂದ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಓದಿದ್ದು ಸ್ವಲ್ಪವಾದರೂ, ಕಲೆಯ ಮೇಲೆ ಅಪಾರ ಭಕ್ತಿ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದ ಅವರು, ನಿಜಾರ್ಥದಲ್ಲಿ ರಂಗಭೂಮಿಯ ಜೀವಂತ ಶಿಲ್ಪಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ರತ್ನಮ್ಮ ಅವರು ಬಸವರಾಜ ಗುಮ್ಮಗೇರಿ, ಪಿ.ಬಿ. ದುತ್ತರಗಿ, ಮಾಲತಿ ಸುಧೀರ್ ಮುಂತಾದ ಪ್ರಮುಖ ನಾಟಕ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಬದುಕಿಗಾಗಿ ಶ್ರಮವನ್ನೇ ನಂಬಿಕೊಂಡು ವೃತ್ತಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಈ ಕಲಾವಿದೆ, ಇಂದೀಗ ಅನಾರೋಗ್ಯದಿಂದ ಬಳಲುತ್ತಾ ಕಾಲು ನೋವಿನ ಕಾರಣದಿಂದಾಗಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಿಗೆ ನೀಡಲಾಗುವ ಮಾಸಾಶನವನ್ನು ಪಡೆಯುತ್ತಿರುವ ರತ್ನಮ್ಮ ಅವರು, ಯಾವುದೇ ಶಿಫಾರಸು ಅಥವಾ ಮನವಿ ಮಾಡದೆ, ನಿಷ್ಠೆಯಿಂದ ಕಲೆಯ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆ, ಕಲೆಗೆ ಅರ್ಪಿತ ಜೀವನವನ್ನು ನಡೆಸಿದ ರತ್ನಮ್ಮ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬುದು ಕಲಾಭಿಮಾನಿಗಳ ಹಾಗೂ ರಂಗಭೂಮಿ ವಲಯದ ಒಮ್ಮತವಾಗಿದೆ.
ಹಿಂದೆ ಹನುಮಂತಪ್ಪ ಆಲ್ಕೋಡ ಸಚಿವರಾಗಿದ್ದಾಗ, ರಾಯಚೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ರತ್ನಮ್ಮ ಅವರಿಗೆ ಪ್ರದಾನ ಮಾಡಲಾಗಿತ್ತು. ಅಲ್ಲದೆ, ಕೆಲವು ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಗಳನ್ನೂ ನೀಡಿವೆ.
ರತ್ನಮ್ಮ ಅವರ ಗಂಡ ಉಟಕನೂರು ಗ್ರಾಮದ ಬಸವಲಿಂಗಪ್ಪ ದೇಸಾಯಿ ಕೂಡಾ ರಂಗಭೂಮಿಯ ಕಲಾವಿದರಾಗಿದ್ದು, ಪ್ರಸ್ತುತ ಅವರು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಡೀ ದೇಸಾಯಿ ಕುಟುಂಬವೇ ಕಲೆಗೆ ಸಮರ್ಪಿತವಾಗಿದ್ದು, ಕಳೆದ 30 ವರ್ಷಗಳಿಂದ ಸಿರವಾರದಲ್ಲಿ ವಾಸಿಸುತ್ತಿದೆ.
ಕಲಾವಿದರನ್ನು ಅವರ ಬದುಕಿನಲ್ಲಿಯೇ ಗೌರವಿಸುವ ಸಂಸ್ಕೃತಿ ಬೆಳೆಸುವ ದೃಷ್ಟಿಯಿಂದ, ಸರ್ಕಾರವು ಈ ಬಾರಿ ರತ್ನಮ್ಮ ಬಿ.ಎಸ್. ದೇಸಾಯಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ, ಅವರ ನಿಷ್ಠೆ ಮತ್ತು ಸೇವೆಗೆ ನ್ಯಾಯ ತೀರಿಸಬೇಕು ಎಂಬುದು ಎಲ್ಲರ ಹಾರೈಕೆ.