ಕಗ್ಗತ್ತಲ ಆ ರಾತ್ರಿ ಹಾಸ್ಟೆಲ್ ನ ರೂಮ್ ನಲ್ಲಿದ್ದ ಆಕೆಗೆ ಅಚ್ಚರಿಯ ಎಚ್ಚರಿಕೆ, ಶತಾಯ ಗತಾಯ ಪ್ರಯತ್ನ ಪಟ್ಟರೂ ಚೂರು ಮುಚ್ಚಲೊಲ್ಲದು ಕಣ್ಣ ರೆಪ್ಪೆ

ಸಮಯ ಸುಮಾರು 1.45 ಸಹಸ್ರ ಪ್ರಯತ್ನದ ನಂತರ ಕಣ್ಣಾಡಿಸಿದಾಗ ಗಡಿಯಾರಕ್ಕೆ. ಯಾವತ್ತೂ ಆಗದ ಸಂಕಟ, ಕಳವಳ! ಮನಸ್ಸು ಚಂಚಲ ಯಾವುದರ ಸುಳಿವೂ ಸಿಗುತ್ತಿಲ್ಲ. ಸ್ವಿಚ್ ಆಫ್ ಆಗಿದ್ದ ಮೊಬೈಲ್ನಾ ಚಾರ್ಜ್ ಗೆ ಹಾಕಿ, ನಡುರಾತ್ರಿಯ ಶೌಚ ಮುಗಿಸಿ ಬಂದಳಾದರೂ ನಿದ್ದೆಯ ಸುಳಿವಿಲ್ಲ. ಆದದ್ದಾಗಲಿ ಅಂತ ಹಾಸ್ಟೆಲ್ ನ ಕಾರಿಡಾರ್ ನಲ್ಲಿ ಸ್ವಲ್ಪ ಹೊತ್ತು ವಾಕಿಂಗ್ ಮಾಡೋಣ ಅಂತ ನಡೆದಳು, ತಣ್ಣನೆಯ ಗಾಳಿ! ಮೊದಲೇ ಚಳಿಗಾಲದ ಹೊತ್ತು, ದೊಡ್ಡ ಹಾಸ್ಟೆಲ್ ನ ಚಿಕ್ಕ ಕಾರಿಡಾರ್ ಗಳಲ್ಲಿ ಅಲ್ಲೊಂದು ಇಲ್ಲೊಂದು ಉಳಿದ ದೀಪಗಳು ಮೂಲೆಯಲ್ಲೊಂದು ಗಣೇಶನ ವಿಗ್ರಹ ದೂರದಿಂದಲೇ ಭಕ್ತಿ ತೋರಿಸಿದಳು. ಸಂಪೂರ್ಣ ಹಾಸ್ಟೆಲ್ ಸ್ತಬ್ಧವಾಗಿದೆ, ಸ್ಟೆಡಿ ರೂಮ್ ನಲ್ಲೊಂದು ದೀಪ ಉರಿಯುತ್ತಿದೆ. ಕುತೂಹಲದಿಂದಲೇ ಇಣುಕಿದಳಾದರೂ, ಯಾರೊಬ್ಬರು ಕಾಣಲಿಲ್ಲ ನಿರಾಸೆಯಿಂದ ಹೊರಬಂದವಳಿಗೆ ಕಂಡಿದ್ದು ಮೊಬೈಲ್ ನಲ್ಲಿ ಬ್ಯುಸಿ ಇದ್ದ ಆಪ್ತ ಸ್ನೇಹಿತೆ. ಅಲ್ಲಿವರೆಗೆ ಇವಳಿಂದ ಮುಚ್ಚಿಟ್ಟ ಗೆಳೆಯನ ಗುಟ್ಟು ಹೊರಬರಬಹುದೆಂಬ ದುಗುಡ ಸ್ನೇಹಿತೆಗೆ, ಎಲ್ಲಿ ಸ್ಟೆಡಿ ರೂಮ್ ಇಂದ ಹೊರಬಂದ ತನ್ನ ನೋಡಿ ಈ ವರೆಗೆ ಓಡಿದಳೆಂದು ಭಾವಿಸಿದ್ದಾಳೆಂದು ಇವಳಿಗೆ ಆತಂಕ. ಇಬ್ಬರು ಒಬ್ಬರಿಗೊಬ್ಬರು ಸಮಜಾಯಿಸಿ ಕೊಟ್ಟರಾದರೂ ಇಬ್ಬರು ತೃಪ್ತರಾಗಲಿಲ್ಲ. ಕೊನೆಗೆ ಪರಸ್ಪರ ಶುಭರಾತ್ರಿ ಹಂಚಿ ಹೋದರಾದರೂ ಜಗತ್ತೆ ತಲೆ ಮೇಲೆ ಬಿದ್ದಂತೆ ಚಿಂತಿಸಲೆತ್ನಿಸಿದರು. ಇವಳ ಅಳಿದುಳಿದ ಅರ್ಧ ನಿದ್ದೆಯೂ ಪೂರ್ತಿ ಹಾಳಾಯಿತು, ಅವಳ ಶುರು ನಿದ್ದೆಯೂ ಮಾಯವಾಯಿತು. ಮುಂದೆ ಇದ್ದ ಟೀಚರ್ ಬೆಂಚ್ ಬಡಿದಾಗ ಎಚ್ಚರಾಗಿ ಕಂಡ ಕನಸಿನ ಅರ್ಥ ಅರಿಯದೆ, ಪಕ್ಕದಲ್ಲೇ ಇದ್ದವರ ಗುಪ್ತತೆ ಅರಿಯದೆ ಆಪ್ತರಂತೆ ನೋಡಿದ್ದಕ್ಕೆ ಬೆಪ್ಪಾಗಿ, ಕನಸಿಗೂ ಮನಸಿಗೂ ನನಸಿಗೂ ಸರಿದೂಗಿಸಿ, ವಕ್ರವಾದರೂ ಒಪ್ಪದೇ ಮನ ನೆಮ್ಮದಿ ಮಾರಿಬಿಟ್ಟಳು.
ಸವಿಪ್ರಿಯೇ ( ಪ್ರಿಯಾಂಕಾ ಚಂ ಬಿಳ್ಳೂರ)

error: Content is protected !!