ಔರಾದ್ : ಕೇವಲ ಪಾಠ ಹೇಳುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೀತಿ, ಕನ್ನಡದ ಘನತೆ, ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಮೂಲಕ, ನವ ಪೀಳಿಗೆಯನ್ನು ಕನ್ನಡ ಭಾಷಾಪ್ರೇಮಿಗಳಾಗಿ ರೂಪಿಸಿರುವ ಪ್ರಕಾಶ ಗೋದಮಗಾವೆ ಅವರ ಕಾರ್ಯ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.
ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವ ಕೇಂದ್ರ ಸಹಯೋಗದೊಂದಿಗೆ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಡಿಯಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗಿ ರೂಪಿಸಿರುವ ಅವರು, ಪಾಠದ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೂಲಕ ಎಲ್ಲರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ ಎಂದರು.
ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಮಹಾಲಿಂಗ ದೇವರು ಮಾತನಾಡಿ, ಮಕ್ಕಳಿಗೆ ಕಷ್ಟದ ಪರಿಚಯ ಮಾಡಿಕೊಟ್ಟಲ್ಲಿ ಭವಿಷ್ಯ ರೂಪಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಬೆಳೆಸುವ ವಿಧಾನ ಸರಿಯಲ್ಲ ಅದು ಬದಲಾಗಬೇಕಿದೆ ಎಂದರು.
ನಿವೃತ್ತ ಶಿಕ್ಷಕ ಪ್ರಕಾಶ ಗೋದಮಗಾವೆ ಮಾತನಾಡಿ, ಅಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿತ್ತು. ಕನ್ನಡಕ್ಕೆ ಪೂರಕ ವಾತಾವರಣ ಇದ್ದಿರಲಿಲ್ಲ. ಮರಾಠಿ ಪ್ರಭಾವದ ನಡುವೆಯೂ ಛಲದಿಂದ ಸೇವೆ ಮಾಡಿರುವ ಹಿನ್ನೆಲೆ ಇಂದು ಅನೇಕ ವಿದ್ಯಾರ್ಥಿಗಳ ಬಾಳು ಬೆಳಗಿದೆ ಎಂಬುದರ ಕುರಿತು ಅತೀವ ತೃಪ್ತಿ ತಂದಿದೆ ಎಂದರು.
ತಹಸೀಲ್ದಾರ್ ಮಹೇಶ ಪಾಟೀಲ್, 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ. ಮನ್ಮತ ಡೋಳೆ, ಶಿವರಾಜ ಬಿರಾದಾರ, ರಘುನಾಥ ರೊಟ್ಟೆ, ಚಲನಚಿತ್ರ ನಿರ್ದೇಶಕ ಉಮೇಶ ಸಲಗರ್, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿದರು.
ಸಮಾರಂಭದಲ್ಲಿ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ರೇಣುಕಾ ಭಾಲೇಕರ್, ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ, ಜಗನ್ನಾಥ ಮೂಲಗೆ, ಅನೀಲ ಕುಮಾರ್ ದೇಶಮುಖ, ಸಂಜೀವ ಶಟಕಾರ್, ಸಂಜೀವ ಕಂಠಾಳೆ, ಜಗನ್ನಾಥ ದೇಶಮುಖ, ರವೀಂದ್ರ ಮುಕ್ತೆದಾರ, ಅಮರಸ್ವಾಮಿ, ಮನ್ಮತಪ್ಪ ಹುಗ್ಗೆ, ಲಿಂಗೇಶ್ವರಿ ಗೋದಮಗಾವೆ, ಅವಿನಾಶ ಗೋದಮಗಾವೆ ಸೇರಿದಂತೆ ಇನ್ನಿತರರಿದ್ದರು. ಕು. ಸಾನ್ವಿ ಡಿಗ್ಗಿ ಮಗುವಿನಿಂದ ನಡೆದ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು.
ಬಳಿಕ ಕನ್ನಡ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ ತಾಲೂಕು ಘಟಕ, ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಸರ್ಕಾರಿ ನೌಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಕುರುಬರವಾಡಿ ಗ್ರಾಮಸ್ಥರು, ಸಾರ್ವಜನಿಕರು ಪ್ರಕಾಶ ಗೋದಮಗಾವೆ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.
ವರದಿ : ರಾಚಯ್ಯ ಸ್ವಾಮಿ
