ಗೋಪಿನಾಥ ಪಳನಿಯಪ್ಪನ್ ನೇತೃತ್ವದಲ್ಲಿ ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ

ಬೆಳಗಾವಿ : ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಮನರೇಗಾ ತಿದ್ದುಪಡಿ ಮಸೂದೆ ವಾಪಸ್ಸು ಪಡೆಯುವಂತೆ ಆಗ್ರಹಿಸಿ, ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಶ್ರೀ ಗೋಪಿನಾಥ ಪಳನಿಯಪ್ಪನ್ ನೇತೃತ್ವದಲ್ಲಿ ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು .

ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಬಡವರ ಬದುಕಿಗೆ ಆಸರೆಯಾಗಿರುವ ಮನರೇಗಾ ಯೋಜನೆಯನ್ನು ಉಳಿಸಿ–ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಹಾತ್ಮ ಗಾಂಧೀಜಿಯವರ ಹೆಸರನ್ನೇ ಅಳಿಸುವ ಯತ್ನವನ್ನು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ; ಇಂತಹ ಜನವಿರೋಧಿ ತಿದ್ದುಪಡಿಗಳನ್ನು ಒಗ್ಗಟ್ಟಾಗಿ ಎದುರಿಸಿ ಜನಪರ ಯೋಜನೆ ಉಳಿಸಿಕೊಳ್ಳಲು ಒಟ್ಟಾಗಿ ನಿಲ್ಲಬೇಕಾಗಿದೆ‌. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಭದ್ರತೆ ನೀಡುವ ಉದ್ದೇಶದಿಂದ ಮಾಜಿ ಪ್ರಧಾನಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು 2005ರಲ್ಲಿ ಮನರೇಗಾ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಗ್ರಾಮೀಣ ಜನರ ಬದುಕಿಗೆ ಆಶಾಕಿರಣವಾಗಿದ್ದು, ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಂತಹ ಜನಪರ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ವಿರೋಧಿಸುತ್ತದೆ.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಆಸೀಫ್ ಸೇಠ, ಶ್ರೀ ಮಹಾತೇಶ ಕೌಜಲಗಿ, ಶ್ರೀ ಬಾಬಾಸಾಹೇಬ ಪಾಟೀಲ್, ಶ್ರೀ ವಿಶ್ವಾಸ ವೈದ್ಯ, ಮಾಜಿ ಸಚಿವ ಶ್ರೀ ವೀರಕುಮಾರ ಪಾಟೀಲ್, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳ್ಕರ್, ವಾಕರಸಾ ಸಂಸ್ಥೆ ಉಪ ಸುನೀಲ‌ ಹಣಮನ್ನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಸುಧಾಕರ ಬಡಿಗೇರ, ಯುವರಾಜ ಕದಂ ಮಂಜುನಾಥ ಎಚ್. ಭಣೆ, ಗಜಾನನ ಕಾಗನೇಕರ್, ಮಾಜಿ ಶಾಸಕ ಶ್ಯಾಮ್ ಘಾಟಗೆ, ಕಾರ್ತಿಕ ಪಾಟೀಲ್, ಸಿದ್ದಿಕ್ ಅಂಕಲಗಿ, ಸಾಗರ ದಿವಟಗಿ, ಅನಂತಕುಮಾರ್ ಬ್ಯಾಕೋಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಸದಾನಂದ ಎಂ

error: Content is protected !!