ಕೇಜ್ರಿವಾಲ್ ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಜಾರಿಯಲ್ಲಿ ‘ಅಪರಾಧ ಸಂಚಿನಲ್ಲಿ ಭಾಗಿ’ಯಾಗಿದ್ದಾರೆ ಸಿಬಿಐ ಚಾರ್ಜ್ ಶೀಟ್

ದೆಹಲಿ : ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ತನ್ನ ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಜಾರಿಯಲ್ಲಿ ‘ಅಪರಾಧ ಸಂಚಿನಲ್ಲಿ ಭಾಗಿ’ಯಾಗಿದ್ದಾರೆ ಎಂದು ಆರೋಪಿಸಿದೆ.

 

ಪ್ರಕರಣದಲ್ಲಿ ತನ್ನ ಐದನೇ ಮತ್ತು ಅಂತಿಮ ಚಾರ್ಜ್ ಶೀಟ್ ಸಲ್ಲಿಕೆಯೊಂದಿಗೆ, ಸಿಬಿಐ ತನ್ನ ತನಿಖೆಯನ್ನು ಮುಕ್ತಾಯಗೊಳಿಸಿದೆ. ಕೇಜ್ರಿವಾಲ್ ಅವರು ಅಬಕಾರಿ ನೀತಿಯನ್ನು ಖಾಸಗೀಕರಣಗೊಳಿಸುವ ಪೂರ್ವ ಯೋಜನೆ ಹೊಂದಿದ್ದರು. ಅದಾದ ಬಳಿಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಆ ಯೋಜನೆಯನ್ನು ರದ್ದುಗೊಳಿಸಲಾಗಿದೆ ಎಂದು ಸಿಬಿಐ ಹೇಳಿದೆ.

 

ಸಹ-ಆರೋಪಿ ಮನೀಶ್ ಸಿಸೋಡಿಯಾ ನೇತೃತ್ವದ ದೆಹಲಿ ಸಚಿವರ ತಂಡ ಈ ಅಬಕಾರಿ ನೀತಿಯನ್ನು ರೂಪಿಸುತ್ತಿರುವಾಗ ಅವರು (ಕೇಜ್ರಿವಾಲ್) ಮಾರ್ಚ್ 2021ರಲ್ಲಿ ತಮ್ಮ ಎಎಪಿಗೆ ಹಣಕಾಸು ಬೆಂಬಲವನ್ನು ಕೋರಿದ್ದರು. ಬಳಿಕ ಕೇಜ್ರಿವಾಲ್ ನಿಕಟ ಮತ್ತು ಎಎಪಿಯ ಮಾಧ್ಯಮ ಮತ್ತು ಸಂವಹನದ ಉಸ್ತುವಾರಿ ವಿಜಯ್ ನಾಯರ್ ದೆಹಲಿಯ ಅಬಕಾರಿ ವ್ಯವಹಾರದ ವಿವಿಧ ಪಾಲುದಾರರನ್ನು ಸಂಪರ್ಕಿಸಿದ್ದಾರೆ. ಈ ಉದ್ಯಮಿಗಳಿಗೆ ಅನುಕೂಲವಾಗುವಂತಹ ಅಬಕಾರಿ ನೀತಿ ಜಾರಿ ಮಾಡಿ ಅದರ ಬದಲಿಗೆ ಅಕ್ರಮ ಹಣವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಆದರೆ ಆಮ್ ಆದ್ಮಿ ಪಕ್ಷ (ಎಎಪಿ) ಆರೋಪವನ್ನು ನಿರಾಕರಿಸಿದೆ.