ಔರಾದ್ : ಮಕ್ಕಳ ಆರೋಗ್ಯ ವೃದ್ಧಿಗೆ ಹಾಗೂ ಅಪೌಷ್ಟಿಕತೆ ತಡೆಗೆ ಸರಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಶಿಕ್ಷಕರು ಅವುಗಳ ಕುರಿತು ಅರಿವು ಮೂಡಿಸಬೇಕು ಎಂದು ಬಿಸಿಯೂಟ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ ಹೇಳಿದರು. ಪಟ್ಟಣದ ಶಿಕ್ಷಕರ ಬಡಾವಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಕ್ಷರ ದಾಸೋಹ ಹಾಗೂ ಅಜೀಂ ಪ್ರೇಮಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ನಡೆದ ವಾರದ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಇನ್ಮುಂದೆ ವಾರದ 6 ದಿನವೂ ಮೊಟ್ಟೆ ನೀಡಲಾಗುತ್ತದೆ. ಇದಕ್ಕೆ ಅಜೀಂ ಪ್ರೇಮ್‌ಜೀ ಫೌಂಡೇಷನ್ ನೆರವು ನೀಡಿದೆ ಎಂದರು. ಪೌಷ್ಟಿಕಾಂಶ ವೃದ್ಧಿಗಾಗಿ ಆಹಾರದ ಜತೆಗೆ ಪೂರಕ ಪೌಷ್ಠಿಕ ಆಹಾರ ವಿತರಿಸುವ ಸಂಬಂಧ ರಾಜ್ಯ ಸರಕಾರವು ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದೊಂದಿಗೆ ಮೂರು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದೆ ಎಂದರು.
ಆರೋಗ್ಯ ಉತ್ತಮವಾಗಿದ್ದರೆ, ಪಾಠ-ಪ್ರವಚನ ತಲೆಗೆ ಹತ್ತುತ್ತದೆ. ಆರೋಗ್ಯ ಚೆನ್ನಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ವಾರಕ್ಕೆ 2 ದಿನ ಮೊಟ್ಟೆ, ಚಿಕ್ಕಿ ಬಾಳೆಹಣ್ಣು ನೀಡಲಾಗುತ್ತಿತ್ತು. ಇನ್ನು ಮುಂದೆ ಪ್ರೇಮ್‌ಜೀ ಫೌಂಡೇಷನ್ ನೆರವಿನಿಂದ ವಾರದ ಎಲ್ಲಾ ದಿನವೂ ಪೂರಕ ಪೌಷ್ಟಿಕ ಆಹಾರ ಲಭಿಸಲಿದೆ. ಎಲ್ಲಾ ಮಕ್ಕಳಿಗೆ ಒಳ್ಳೆಯ ಆಹಾರ ಸಿಗಬೇಕು ಎಂಬುದು ಸರಕಾರದ ಆಶಯ. ಶಾಲೆಯ ಮುಖ್ಯಗುರುಗಳು ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ಸರಿಯಾಗಿ ನೀಡುವಂತೆ ಸೂಚಿಸಿದರು.
ಬಿಆರ್ ಪಿ ಶಶಿಕಾಂತ ಬಿಡವೆ, ಇಸಿಒ ಬಲಭೀಮ ಕುಲಕರ್ಣಿ ಮಾತನಾಡಿ, ಶಾಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ತಮ ಆರೋಗ್ಯವನ್ನು ನೀಡಲು ಸರಕಾರ ಕಾಳಜಿ ವಹಿಸಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲು ಮುಂದೆ ಬಂದಿರುವ ಅಜೀಂ ಪ್ರೇಮ್‌ಜೀ ಅವರದ್ದು ದೊಡ್ಡ ಮನಸ್ಸು. ಪ್ರೇಮ್‌ಜೀ ಮತ್ತು ಕುಟುಂಬ ಕಾರ್ಯಕ್ಕೆ ಸರಕಾರದ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು. ಪ್ರೇಮ್‌ಜೀ ಅವರು ಇಂತಹ ಅನೇಕ ಜನಪರ ಕೆಲಸಗಳು, ದಾನ-ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಪ್ರಶಂಸಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿಶ್ವನಾಥ ಬಿರಾದಾರ್, ಮುಖಂಡ ಚಂದ್ರಶೇಖರ ಪಾಟೀಲ್ ಮಾತನಾಡಿದರು. ದೈಹಿಕ ಶಿಕ್ಷಣಾಧಿಕಾರಿ ಜೋಹೆಲ್ ಜೈರಾಜ್, ಇಸಿಒ ರಾಜಕುಮಾರ ಹಲಮಡಗೆ, ಸಿಆರ್ ಪಿ ಛಾಯಾ, ರವಿಂದ್ರ ಡಿಗ್ಗಿ, ಗಫರ್ ಖಾನ್, ಶಾಲೆಯ ಮುಖ್ಯಗುರು ಲಿಂಗರಾಜ ಸಿದ್ದಭಟ್ಟೆ, ಶಿಕ್ಷಕರಾದ ಜಗದೇವಿ ವಲ್ಲೇಪೂರೆ, ಶಾಂತಮ್ಮ, ಶಿವಕುಮಾರ, ಸುಮಾವತಿ, ಸಮಶೋದ್ಧಿನ್, ನಾಗನಾಥ್, ಪ್ರೀತಿ ಕೋರೆ ಸೇರಿದಂತೆ ಅನೇಕರಿದ್ದರು.
ವರದಿ ರಾಚಯ್ಯ ಸ್ವಾಮಿ