ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೆ.29ರಂದು ಔರಾದ(ಬಿ) ತಾಲ್ಲೂಕಿನ ಘಮಸುಬಾಯಿ ತಾಂಡಾದಲ್ಲಿರುವ ಸ್ವ-ಗೃಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸಬೇಕೆಂಬ ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು, ದೇಶದ ನಾಗರಿಕರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರತಿ ತಿಂಗಳು ‘ಮನ್ ಕಿ ಬಾತ್’ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ 10 ವರ್ಷ ಪೂರೈಸಿದೆ ಎಂದರು.
ಪ್ರತಿ ತಿಂಗಳು ಹೊಸ ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಪ್ರಧಾನಿಯವರು ಸಕಾರಾತ್ಮಕ ವಿಷಯಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ಜನತೆಗೆ ಕಾರ್ಯಕ್ರಮ ಬಹಳಷ್ಟು ಇಷ್ಟವಾಗಿದೆ. ರೇಡಿಯೋ, ದೂರದರ್ಶನ ಮತ್ತು ಯುಟ್ಯೂಬ್ ಮೂಲಕ ಕೋಟ್ಯಾಂತರ ಜನ ವೀಕ್ಷಿಸುತ್ತಿದ್ದಾರೆ. ದಿನೇ ದಿನೇ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.
ದೊಡ್ಡ ಸಂಖ್ಯೆಯಲ್ಲಿ ಯುವಜನತೆ ಪ್ರಧಾನಿ ಮೋದಿ ಅವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಕಾರ್ಯಕ್ರಮ ಎಲ್ಲರಿಗೂ ಇಷ್ಟವಾಗುತ್ತಿದೆ. ಆದ್ದರಿಂದಲೇ ‘ಮನ್ ಕೀ ಬಾತ್’ ಕಾರ್ಯಕ್ರಮ ದಿನದಿಂದ ದಿನಕ್ಕೆ ಜನಮನ ಸೆಳೆಯುತ್ತಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿ ಬೂತ್ ಗಳಲ್ಲಿ ಕಾರ್ಯಕರ್ತರೆಲ್ಲ ಒಂದೆಡೆ ಸೇರಿ ಪ್ರಧಾನಿಯವರ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದು, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ ಎಂದು ಹೇಳಿದರು. ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ