ಸಾಗರ್ ಖಂಡ್ರೆ ಮನವಿಗೆ ರೈಲ್ವೆ ಸಚಿವರ ಸ್ಪಂದನೆ || 68ನೇ ಧಮ್ಮ ಪರಿವರ್ತನ ದಿವಸ ಯಾತ್ರೆಗೆ ವಿಶೇಷ ರೈಲು

ಬೀದರ್ : ನಾಗಪುರದಲ್ಲಿ ಬರುವ 12ರಂದು ನಡೆಯಲಿರುವ ಧಮ್ಮ ಚಕ್ರ ಪರಿವರ್ತನ ದಿವಸ್ ಕಾರ್ಯಕ್ರಮದಲ್ಲಿ ಬೀದರ್ ಯಾತ್ರಿಕರು ಪಾಲ್ಗೊಳ್ಳಲು ವಿಶೇಷ ರೈಲು ಓಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಮಾಡಿದ್ದ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಬೀದರ್ ಜಿಲ್ಲೆಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ 68ನೇ ಧಮ್ಮಚಕ್ರ ಪರಿವರ್ತನಾ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಯಾತ್ರಿಕರು ಹೋಗುತ್ತಾರೆ. ಹೀಗಾಗಿ ವಿಶೇಷ ರೈಲು ಸೇವೆ ಒದಗಿಸಿ ಎಂದು ಸಾಗರ್ ಖಂಡ್ರೆ ಸೆಪ್ಟೆಂಬರ್ 12ರಂದು ಪತ್ರ ಬರೆದಿದ್ದರು.
ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವರು ವಿಶೇಷ ರೈಲು ಸಂಚಾರಕ್ಕೆ ಅನುಮತಿ ನೀಡಿದ್ದು, ಸಾಗರ್ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ.

ರೈಲು ಸಂಖ್ಯೆ 07023 ಅಕ್ಟೋಬರ್ 11ರ ಶುಕ್ರವಾರ ಸಂಜೆ 6.45ಕ್ಕೆ ಬೀದರ್ ನಿಂದ ಹೊರಟು ಅ.12ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ನಾಗಪುರ ತಲುಪಲಿದೆ. ಮತ್ತೆ ರೈಲು ಸಂಖ್ಯೆ 07024 ಭಾನುವಾರ ಅಂದರೆ ಅ.13ರಂದು ನಾಗಪುರದಿಂದ ರಾತ್ರಿ 8.10ಕ್ಕೆ ಹೊರಟು, ಮಾರನೆ ದಿನ ಅಂದರೆ ಅ.14ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೀದರ್ ತಲುಪಲಿದೆ.