ನ.23 ಮತ್ತು 24ರಂದು ಶರಣ ಕಮ್ಮಟ, ಅನುಭವ ಮಂಟಪ ಉತ್ಸವ.. ಭಿತ್ತಿಪತ್ರ ಬಿಡುಗಡೆ

 

ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ !

 

ಔರಾದ್ : ಶರಣ ಶ್ರೇಷ್ಠ ಬಸವಣ್ಣನವರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಇದೇ ನ.23 ಮತ್ತು 24ರಂದು ನಡೆಯಲಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ.‌ಬಸವಲಿಂಗ ಪಟ್ಟದ್ದೇವರು ಹೇಳಿದರು. ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ-2024 ವಾಲ್ ಪೋಸ್ಟ‌ರ್, ಭಿತ್ತಿಪತ್ರಗಳು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಅವರು, ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ ಎಂದು ಪ್ರಚಾರವಾಗಬೇಕು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಮೂಲಕ ಅನುಭವ ಮಂಟಪ ವೈಭವ ಹೆಚ್ಚಿಸಿ ಹೆಚ್ಚಿದಬೇಕಾಗಿದೆ. ಅನುಭವ ಮಂಟಪ ಹೃದಯವಿದ್ದಂತೆ, ಸಾಮಾಜಿಕ ಕಳಕಳಿಯುಳ್ಳ ವಿವಿಧ ವರ್ಗಗಳಿಗೆ ಸೇರಿದ ಸಮಾನ ಮನಸ್ಕರನ್ನು 12ನೇ ಶತಮಾನದಲ್ಲಿ ಸಂಘಟಿಸಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಬಸವಣ್ಣನವರು ಅಂದಿನ ಕಾಲದಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಹದಿ ಹಾಕಿದ್ದರು. ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಳಹದಿಯಾಗಿದೆ. ಅನುಭವ ಮಂಟಪಕ್ಕೆ ಬರುವ ಪರಿಪಾಠ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಭಾಲ್ಕಿಯ ಎಲ್ಲ ಕಾರ್ಯದಲ್ಲಿಯೂ ಔರಾದ್ ತಾಲೂಕಿನ ಜನರು ಕೈಜೋಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, 12ನೇ ಶತಮಾನದ ಶಿವಶರಣರು ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಸಮಾಜದ ಲೋಪದೋಷಗಳನ್ನು ತಿದ್ದುವ ಸಲುವಾಗಿ ವಚನಗಳನ್ನು ಮಾಧ್ಯಮವನ್ನಾಗಿ ಬಳಸಿಕೊಂಡ ಎಲ್ಲ ಶಿವಶರಣರು ಹಾಗೂ ವಚನಕಾರರು ತಮ್ಮ ವಚನ ಸಾಹಿತ್ಯದಲ್ಲಿ ಸಮಾಜದ ಲೋಪ ದೋಷಗಳನ್ನು ಎತ್ತಿ ಹಿಡಿದು ತೋರಿಸುತ್ತಿದ್ದರು. ಇದು ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳಂತೆ ಅಂದಿನ ಕಾಲದಲ್ಲಿ ಜನರಿಗೆ ಬದುಕಿಗೆ ಅವಶ್ಯಕ ಮಾರ್ಗದರ್ಶನ ನೀಡುವ ನಿಯಮಾವಳಿಗಳೂ ಆಗಿದ್ದವು.

 

ಬಸವಣ್ಣ ಅವರು ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವದ ಬುನಾದಿ ಹಾಕಿದ್ದು, ‘ಕಾಯಕ ದಾಸೋಹ’ ತತ್ವದ ಆಧಾರದ ಮೇಲೆ ಶೋಷಣೆ ರಹಿತ ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾದರಿಯಾಗಿದ್ದರು.

ಅನುಭವ ಮಂಟಪ ಉತ್ಸವ ವಿಜೃಂಭಣೆಯಿಂದ ಮಾಡುತ್ತಿದ್ದರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಮೂಲಕ ಉತ್ಸವಕ್ಕೆ‌ ಮೆರಗು ನೀಡಬೇಕಿದೆ ಎಂದರು.

 

ಪ್ರಮುಖರಾದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಬಂಡೆಪ್ಪ ಕಂಟೆ, ಕಲ್ಲಪ್ಪ ದೇಶಮುಖ, ಧನರಾಜ ರಾಗಾ, ಪ್ರಕಾಶ ಘೂಳೆ, ರವೀಂದ್ರ ಮೀಸೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ತಮ್ಮಣ್ಣ ದೇಗಲವಾಡೆ, ಚಂದ್ರಕಾಂತ ನಿರ್ಮಳೆ, ವಿರೇಶ ಅಲಮಾಜೆ ಸೇರಿದಂತೆ ಅನೇಕರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!