ವಯನಾಡ್ ದುರಂತ ‘ರಾಷ್ಟ್ರೀಯ ವಿಪತ್ತು’ ಅಲ್ಲವೆಂದ ಕೇಂದ್ರ : ಬಂದ್‌ ಕರೆಕೊಟ್ಟ ಕೇರಳದ ಆಡಳಿತ-ಪ್ರತಿಪಕ್ಷ

ವಯನಾಡ್ ಭೂಕುಸಿತ, ಪ್ರಳಯ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಖಂಡಿಸಿ ನವೆಂಬರ್ 19ರಂದು ಜಿಲ್ಲಾ ಬಂದ್‌ಗೆ ಕೇರಳದ ಆಡಳಿತ ಮತ್ತು ಪ್ರತಿಪಕ್ಷಗಳು ಕರೆ ನೀಡಿವೆ.

ಈ ಕುರಿತು ಘೋಷಣೆ ಮಾಡಿರುವ ಆಡಳಿತರೂಢ ಸಿಪಿಐ(ಎಂ) ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್‌) ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್‌) ನವೆಂಬರ್ 19ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಯನಾಡ್ ಜಿಲ್ಲಾ ಬಂದ್ ಮಾಡಲಾಗುವುದು. ಅಂಗಡಿ-ಮುಂಗಟ್ಟುಗಳು ಮತ್ತು ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುವುದಿಲ್ಲ ಎಂದಿವೆ. ಎಲ್‌ಡಿಎಫ್‌ ಮತ್ತು ಯುಡಿಎಫ್‌ ಪ್ರತ್ಯೇಕವಾಗಿ ಪ್ರತಿಭಟಿಸಲಿವೆ ಎಂದು ತಿಳಿದು ಬಂದಿದೆ.

 

ರಾಜ್ಯ ಕಂದಾಯ ಸಚಿವ ಕೆ.ರಾಜನ್ ಕೇಂದ್ರದ ನಿಲುವಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಇದು ‘ದುರದೃಷ್ಟಕರ’ ಎಂದಿದ್ದಾರೆ. ಕೇರಳವನ್ನು ಬದಿಗೆ ಸರಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಹೇಳಿದ್ದಾರೆ.

 

ಆದರೆ, ಕೇಂದ್ರ ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡಿದ್ದು, ಯಾವುದೇ ಪಕ್ಷಪಾತ ಧೋರಣೆಯನ್ನು ಕೇಂದ್ರ ಹೊಂದಿಲ್ಲ. ಸ್ಥಾಪಿತ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಬದ್ಧವಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ (SDRF)ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF)ಯ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

 

ಸ್ಥಾಪಿತ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ, ವಯನಾಡ್ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂಬುವುದಾಗಿ ಘೋಷಿಸಲು ಬರುವುದಿಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

 

ಜುಲೈ 30,2024ರಂದು ಕೇರಳದ ವಯನಾಡ್ ಜಿಲ್ಲೆ ವೈತ್ತಿರಿ ತಾಲೂಕಿನ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಪುಂಜಿರಿಮಟ್ಟಂ, ಮುಂಡಕ್ಕೈ, ಚೂರಲ್ಮಲಾ ಮತ್ತು ವೆಳ್ಳರಿಮಲದಲ್ಲಿ ಭೀಕರ ಭೂಕುಸಿತ ಮತ್ತು ಜಲಪ್ರಳಯ ಸಂಭವಿಸಿತ್ತು. ಈ ಘಟನೆಯಲ್ಲಿ 420 ಜನರು ಸಾವನ್ನಪ್ಪಿದ್ದು, 397 ಮಂದಿ ಗಾಯಗೊಂಡಿದ್ದಾರೆ ಮತ್ತು 118 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಕೇರಳದ ಇತಿಹಾಸದಲ್ಲಿ ಇದೊಂದು ಕರಾಳ ಘಟನೆಯಾಗಿದೆ.

 

ಈ ಭೂಕುಸಿತ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ 2000 ಕೋಟಿ ರೂಪಾಯಿ ನೆರವು ನೀಡಬೇಕು ಎಂದು ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ 2024-25 ಹಣಕಾಸು ವರ್ಷದಲ್ಲಿ ರಾಜ್ಯದ ಎಸ್‌ಡಿಆರ್‌ಎಫ್‌ ನಿಧಿಗೆ 388 ಕೋಟಿ ರೂ. ನೀಡಿದೆ. ಕೇರಳ ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಕೀಲರು ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 1, 2024 ರ ಹೊತ್ತಿಗೆ ಎಸ್‌ಡಿಆರ್‌ಎಫ್ ನಿಧಿಯಲ್ಲಿ 394.99 ಕೋಟಿ ರೂ. ಇದೆ ಎಂಬುವುದನ್ನು ಕೇಂದ್ರ ಎತ್ತಿ ತೋರಿಸಿದೆ. ಈ ತಿಂಗಳಾಂತ್ಯಕ್ಕೆ ಕೇರಳಕ್ಕೆ ಹಣ ಮಂಜೂರು ಮಾಡುವ ಕುರಿತು ಕೇಂದ್ರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

error: Content is protected !!