ರಾಜ್ಯದ ‘ಗ್ಯಾರಂಟಿ’ ಯೋಜನೆಗಳ ಬಗ್ಗೆ ‘ಸುಳ್ಳು ಜಾಹೀರಾತು’ ಕ್ರಮಕ್ಕೆ ಚಿಂತನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಬಳಿಕ ಬಿಜೆಪಿಯವರು, ‘ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಂಡಿಲ್ಲ.

 

ಮಹಾರಾಷ್ಟ್ರದಲ್ಲಿಯೂ ಅನುಷ್ಟಾನವಾಗುವುದಿಲ್ಲ’ ಎಂದು ಸುಳ್ಳು ಜಾಹೀರಾತು ನೀಡಿದ್ದಾರೆ. ಇದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

 

ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ 56 ಸಾವಿರ ಕೋಟಿ ರೂ. ಮೀಸಲಿಟ್ಟು, ಸಂಪೂರ್ಣವಾಗಿ ಅನುಷ್ಟಾನಗೊಳಿಸಿದೆ. ಇದಕ್ಕೆ ವಿರುದ್ಧವಾಗಿ ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದರೆ ನಾವು ಖಂಡಿತವಾಗಿ ಸಹಿಸುವುದಿಲ್ಲ. ಸಂಬಂಧಪಟ್ಟ ಐದು ಇಲಾಖೆಗಳು ಜಾಹೀರಾತು ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ದೂರು ನೀಡಬೇಕಾಗುತ್ತದೆ‌ ಎಂದು ಹೇಳಿದರು.

 

ತುಮಕೂರಿನಲ್ಲಿ ಗ್ಯಾರಂಟಿ ಯೋಜನೆಗ ಸಮಾವೇಶ ಹಮ್ಮಿಕೊಂಡಿಲ್ಲ. ತುಮಕೂರು ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಅನೇಕ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುತ್ತದೆ. ಇದೇ ರೀತಿ ಎಂಟು ತಿಂಗಳ ಹಿಂದೆಯೂ ಕಾರ್ಯಕ್ರಮ ಮಾಡಲಾಗಿತ್ತು ಎಂದು ತಿಳಿಸಿದರು‌.

error: Content is protected !!