ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ಅನುದಾನ ತರಲಾಗಿದೆ. ಕೆಲಸ ಕಳಪೆಯಾಗಿ ಮಾಡುತ್ತಿದ್ದು, ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಶಿಕ್ಷೆ ಎದುರಿಸಲು ಸಿದ್ದರಿರಬೇಕು ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಔರಾದ(ಬಿ) ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ನ.29ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೆಜೆಎಂ ಕಾಮಗಾರಿಯ ಬಗ್ಗೆ ಹಿಂದಿನಿಂದಲೂ ನಿರಂತರ ದೂರುಗಳು ಬರುತ್ತಿವೆ. ಕಾಮಗಾರಿ ನಡೆದ ಯಾವ ಗ್ರಾಮದಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಾಳಾದ ರಸ್ತೆ ಸರಿಪಡಿಸದೇ ಬಿಟ್ಟಿರುವುದು, ಟ್ಯಾಪ್‌ಗಳು ಮುರಿದು ಬಿದ್ದಿರುವುದು, ಚರಂಡಿಯಲ್ಲಿ ಪೈಪುಗಳನ್ನು ಬಿಟ್ಟಿರುವುದು, ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿರುವುದು, ಬಾವಿ ಕೊರೆಯದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಹಾಗಾಗಿ ಕಾಮಗಾರಿ ಪರಿಶೀಲಿಸದೇ ಅಧಿನಕ್ಕೆ ಪಡೆಯಬಾರದೆಂದು ತಿಳಿಸಿದರೂ ಕೆಲವು ಪಿಡಿಓಗಳು ಗುತ್ತಿಗೆದಾರರ ಆಮೀಷಕ್ಕೆ ಒಳಗಾಗಿ ಕಾಮಗಾರಿಯನ್ನು ಪಂಚಾಯತ್ ಅಧಿನಕ್ಕೆ ಪಡೆದಿದ್ದಾರೆ. ಮುಂದೆ ಸಂಬಂಧಿಸಿದ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿಸಿ, ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಜೆಪಿಎಸ್ ಆಧಾರಿತ ಭಾವಚಿತ್ರಗಳು ಲಭ್ಯವಿವೆ. ಮುಖ್ಯಮಂತ್ರಿಗಳು ಮತ್ತು ಪ್ರಧಾನಮಂತ್ರಿವರೆಗೆ ಮಾಹಿತಿ ಹೋಗಲಿದೆ. ಯೋಜನೆ ಅನುಷ್ಠಾನಗೊಂಡ ಕಡೆಗಳಲ್ಲಿ ಸುಮಾರು 30 ವರ್ಷದವರೆಗೆ ಕುಡಿಯುವ ನೀರಿನ ಯೋಜನೆಗೆ ಅನುದಾನ ಬರುವುದಿಲ್ಲ. ಆರಂಭದಲ್ಲೇ ಇಷ್ಟೊಂದು ಸಮಸ್ಯೆಗಳಿದ್ದರೆ ಮುಂದಿನ ಗತಿಯೇನು ಎಂಬ ಆತಂಕ ಕಾಡುತ್ತಿದೆ. ವಿಷಯ ಬಹಳಷ್ಟು ಗಂಭೀರವಾಗಿದ್ದು, ಕಾಮಗಾರಿ ಕಳಪೆಯಾಗಲು ಕಾರಣರಾದವರ ವಿರುದ್ಧ ಕ್ರಮವಾಗಬೇಕು. ನಷ್ಟವಾದ ಹಣ ಮರು ಹೊಂದಿಸಿ ಸರಿಪಡಿಸುವ ಕೆಲಸವಾಗಬೇಕು. ಜನತೆಗೆ ಸಮರ್ಪಕವಾಗಿ ನೀರು ಒದಗಿಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಅಲ್ಲದೇ ಜನತೆಯ ಅತ್ಯವಶ್ಯಕತೆಗಳಲ್ಲಿ ಒಂದಾದ ಕುಡಿಯುವ ನೀರಿಗಾಗಿ ಧರಣಿ ಸತ್ಯಾಗ್ರಹ ಮಾಡುವುದಕ್ಕೂ ಸಿದ್ಧ ಎಂದು ಹೇಳಿದರು.
ಬಾವಲಗಾಂವ, ನಂದಿ ಬಿಜಲಗಾಂವ ಸೇರಿದಂತೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲ. ಔರಾದ(ಬಿ) ಮತಕ್ಷೇತ್ರದ ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನು ನಿಯೋಜಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ. ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋಗುತ್ತಿದ್ದಾರೆ. ಹೀಗಾದರೆ ಜನತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹೇಗೆ ಕಳುಹಿಸಲು ಸಾಧ್ಯ ? ಶಿಕ್ಷಣದ ಅಭಿವೃದ್ಧಿ ಆಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆಗಳನ್ನು ಸುಧಾರಿಸಬೇಕು. ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಾಗಬೇಕು ಸಿಸಿ ಟೀವಿಗಳನ್ನು ಅಳವಡಿಸಬೇಕು. ಪ್ರತಿ ಶಾಲೆಯಲ್ಲಿ ಕಂಪೌಂಡ್, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.
ಔರಾದ ಕ್ಷೇತ್ರದಲ್ಲಿ ಹೆಚ್ಚು ಮಳೆಯಾದರೂ ಮತ್ತು ಮಳೆ ಕೊರತೆಯಾದರೂ ರೈತರು ಬೆಳೆ ಹಾನಿ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಸರ್ಕಾರದ ಎಲ್ಲ ಯೋಜನೆಗಳು ರೈತರಿಗೆ ತಲುಪಿಸಬೇಕು. ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕನಿಷ್ಠ ವಾರಕ್ಕೆ ಒಮ್ಮೆಯಾರೂ ಪ್ರತಿ ಗ್ರಾಮಕ್ಕೆ ತೆರಳಿ ಇಲಾಖೆಯ ಯೋಜನೆಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.
ಸರ್ಕಾರಿ ಶಾಲೆ ದನ ಕಟ್ಟಲು ಬಳಕೆ- ಆಕ್ರೋಶ:
ಭಂಡಾರ ಕಮಟಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸುಮಾರು ವರ್ಷಗಳಿಂದ ತಮ್ಮ ಖಾಸಗಿ ಟ್ರ್ಯಾಕ್ಟರ್ ಇಡುತ್ತಿದ್ದಾರೆ. ದನ ಕರುಗಳನ್ನು ಕಟ್ಟುತ್ತಿದ್ದಾರೆ. ಹೀಗಾದಲ್ಲಿ ಮಕ್ಕಳು ಹೇಗೆ ಶಿಕ್ಷಣ ಪಡೆಯಬೇಕು. ಇಷ್ಟಿದ್ದರೂ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಷ್ಟು ಬಾರಿ ಶಾಲೆಗೆ ಭೇಟಿ ನೀಡಿದ್ದೀರಿ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ನೇಮಕಾತಿಯಲ್ಲಿ ಅಕ್ರಮ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಬಹಳಷ್ಟು ಅಕ್ರಮವಾಗಿದೆ. ಅರ್ಜಿದಾರರಿಂದ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಛೇರಿಯನ್ನು ಬ್ರೋಕರ್‌ಗಳ ಅಡ್ಡಾ ಮಾಡಿದ್ದೀರೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ವಿರುದ್ದ ಆಕ್ರೋಶ ಹೊರಹಾಕಿದರು. ಈ ನೇಮಕಾತಿಯನ್ನು ರದ್ದುಪಡಿಸಿ ಪುನಃ ನಡೆಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಆರೋಗ್ಯ, ರೇಷ್ಮೆ, ಅರಣ್ಯ, ಪಂಚಾಯತ ರಾಜ್ ಇಂಜಿನಿಯರಿಂಗ್, ಲೋಕೋಪಯೋಗಿ, ಜೆಸ್ಕಾಂ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಾಲ್ಲೂಕು ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ.ಕೆ. ಔರಾದ(ಬಿ) ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ