ಔರಾದ: ತಾಲೂಕಿನ ಚಿಂತಾಕಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಜ್ಞಾನ ದೇಗುಲದಲ್ಲಿ ಹೆಚ್ಚೆವು ಕನ್ನಡದ ದೀಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿಎಸ್ಐ ಸಿದ್ದಲಿಂಗ ಕನ್ನಡ ಭಾಷೆಯ ಹೀರಿಮೆಯ ಬಗ್ಗೆ ತಿಳಿದುಕೊಂಡು ಕನ್ನಡವನ್ನು ಉಳಿಸಿ ಬೆಳೆಸುವುದು ಬಹಳ ಪ್ರಾಮುಖ್ಯವಾಗಿದೆ ಹಾಗಾಗಿ ವಿದ್ಯಾರ್ಥಿ ಜೀವನದಿಂದಲೇ ಕನ್ನಡವನ್ನು ಬೆಳೆಸಲು ತಾವುಗಳು ಮುಂದಾಗಬೇಕು ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವೆಹಾರಗಳಲ್ಲಿ ಬಳಸಿದ್ದಾಗಲೇ ಮಾತ್ರ ಉಳಿಸಲು ಸಾಧ್ಯವೆಂದರು.
ಸಾಹಿತಿ ಚಂದ್ರಕಾಂತ ನಿರ್ಮಳೆ ಮಾತನಾಡಿ ಕನ್ನಡಿಗರು ಎಲ್ಲಾ ಭಾಷೆಯನ್ನು ಕಲಿತು ಕನ್ನಡವನ್ನು ಬೆಳೆಸಬೇಕು ಕನ್ನಡಕ್ಕೆ ಬಹು ದೊಡ್ಡ ಇತಿಹಾಸವೇ ಇದೆ ಆದರೆ ಇತ್ತಿಚಿನ ದಿನಗಳಲ್ಲಿ ಗಡಿಭಾಗದಲ್ಲಿ ಕನ್ನಡ ಭಾಷೆ ಕುಂಠಿತವಾಗುತ್ತಿದೆ ಹಾಗಾಗಿ ನಾವುಗಳು ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಬೇಕು ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.8 ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಇದೆ.ಆದರೆ ನಮ್ಮ ಮಿತಿಮೀರಿದ ಇಂಗ್ಲೀಷ್ ವ್ಯಾಮೋಹದಿಂದಾಗಿ ಪ್ರಪಂಚದ ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡ ತನ್ನ ನೆಲದಲ್ಲೇ ನಶಿಸುತ್ತಿದೆ.ಕನ್ನಡ ಶಾಲೆಗಳು ದಿನೇದಿನೇ ಮುಚ್ಚುತ್ತಿವೆ ಎಂದು ವಿಷಾದಿಸಿದರು.ಕನ್ನಡ ಭಾಷೆಯಲ್ಲಿ ಅಗಾಧವಾದ ಶಕ್ತಿ ಇದೆ ಇಂದಿನ ಮಕ್ಕಳಿಗೆ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷವಾಕ್ಯ ಆಗಬೇಕಾಗಿದೆ.ಕನ್ನಡ ಸಾಹಿತ್ಯ ಪರಂಪರೆಯ ಅರಿವು ಪ್ರತಿಯೊಬ್ಬ ಕನ್ನಡಿಗ ಹೊಂದಬೇಕಾಗಿದೆ ಎಂದರು.
ಓಂ ಪ್ರಕಾಶ್ ದಡ್ಡೆ ಮಾತನಾಡಿ ಗಡಿಭಾಗದಲ್ಲಿ ಕನ್ನಡ ದೀಪ ಬೆಳಗಿಸಿ ಕನ್ನಡವನ್ನು ಬೆಳೆಸುತ್ತಿರುವುದು ಬಹಳ ಖುಷಿ ತಂದಿದೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸುವುದು ಅನಿವಾರ್ಯ.ಆದರೆ ಅದಕ್ಕೋಸ್ಕರ ಕನ್ನಡವನ್ನು ಮೂಲೆ ಗುಂಪು ಮಾಡಬಾರದು.ಕನ್ನಡ ಭಾಷೆ ನಾಶವಾದರೆ ಈ ನೆಲದ ಸಂಸ್ಕೃತಿ ನಾಶವಾಗುತ್ತದೆ.ಈ ಹಿನ್ನೆಲೆಯಲ್ಲಿ ನಾಡಿನ ಆಧಾರ ಸ್ಥಂಭಗಳಾದ ಮಕ್ಕಳು ಮಾತೃಭಾಷೆಯನ್ನು ಉಳಿಸಲು ಮುಂದಾಗಬೇಕು ಎಂದ ಅವರು,ನೀವು ಎಷ್ಟು ಭಾಷೆಯನ್ನು ಬೇಕಾದರೂ ಕಲಿಯಿರಿ.ಆದರೆ ಮಾತೃ ಭಾಷೆಯನ್ನು ಮಾತ್ರ ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೆ ವೇಳೆ ಕರವೇ ತಾಲೂಕು ಅಧ್ಯಕ್ಷ ಅನಿಲ್ ದೇವಕತ್ತೆ,ಕರವೇ ಚಿಂತಾಕಿ ವಲಯ ಅಧ್ಯಕ್ಷ ನವೀನ್ ರೆಡ್ಡಿ,ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರೇಡ್ಡಿ,ಪತ್ರಕರ್ತ ಅಂಬಾದಾಸ ಉಪ್ಪಾರ,ಮುಖ್ಯೋಪಾಧ್ಯಾಯ ಸುಧಾಕರ್ ಸಾಗಾವೆ,ಎಸ್.ಡಿ.ಎಮ್.ಸಿ ಅಧ್ಯಕ್ಷ ಬಾಬುರಾವ್,ಕಿರಣ ಅವಲಕೊಂಡೆ,ಶಿಕ್ಷಕ ಪ್ರಶಾಂತ ಶಿಂಧೆ,ಪಂಡರೀನಾಥ,ವಿಜಯಕುಮಾರ್ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ : ರಾಚಯ್ಯ ಸ್ವಾಮಿ