ಔರಾದ್: ಲಿಂಗಾಯತ ಮಹಾಸಮಾವೇಶ ಚಿಂತನೆ

ಔರಾದ್ : ತಾಲೂಕಿನಲ್ಲಿ ಸದ್ಯದಲ್ಲಿಯೇ ಲಿಂಗಾಯತ ಮಹಾ ಸಮಾವೇಶ (ಅಧಿವೇಶನ) ನಡೆಸಲು ಚಿಂತನೆ ನಡೆದಿದೆ. ಇಲ್ಲಿಯ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಲಿಂಗಾಯತ ಸಮುದಾಯದ ಪದಾಧಿಕಾರಿಗಳ ಸಭೆಯಲ್ಲಿ ಲಿಂಗಾಯತ ಸಮಾಜದ ಏಳಗ್ಗೆ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಸಮಾಜದ ಚಿಂತಕರು, ಮುಖಂಡರು ಮಾತನಾಡಿ, ಔರಾದ್ ಮತ್ತು ಕಮಲನಗರ ಎರಡು ತಾಲೂಕಿನ ಲಿಂಗಾಯತರು ಸೇರಿ ಲಿಂಗಾಯತ ಮಹಾಸಮಾವೇಶ ಮಾಡಬೇಕು. ಇದರಿಂದ ಕಮಲನಗರ ತಾಲೂಕಿನ ಲಿಂಗಾಯತ ಪದಾಧಿಕಾರಿಗಳ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.

 

ಸಮಾಜದ ಈ ಸಮಾವೇಶ ಜಿಲ್ಲೆ, ರಾಜ್ಯದಲ್ಲಿ ಐತಿಹಾಸಿಕ ಸಮಾವೇಶವಾಗಬೇಕು. ಲಿಂಗಾಯತರ ಶಕ್ತಿಯ ಜತೆಗೆ ನಾಡಿಗೆ ಒಳ್ಳೆಯ ಸಂದೇಶ ಹೋಗುವಂತಹ ಸಮಾವೇಶ ಇದಾಗಬೇಕಿದೆ. ಆದ್ದರಿಂದ ಎಲ್ಲರೂ ಎಲ್ಲ ರಾಜಕೀಯ, ಭಿನ್ನಾಭಿಪ್ರಾಯ ಮರೆತು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು. ಸಮುದಾಯದ ಹಿತ ಕಾಯುವುದು, ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತು ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಲು ಈ ಸಮಾವೇಶ-ಅಧಿವೇಶನವು ‘ಶಕ್ತಿ ಪ್ರದರ್ಶನ’ಕ್ಕೆ ವೇದಿಕೆಯಾಗಲಿದೆ ಎಂದೇ ಹೇಳಲಾಗುತ್ತದೆ.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಸರಕಾರದ ಸವಲತ್ತು ಪಡೆಯುವುದಕ್ಕಾಗಿ ಲಿಂಗಾಯತ ಮಹಾಸಮಾವೇಶ ಅಗತ್ಯವಿದೆ. ಆದ್ದರಿಂದ ಲಿಂಗಾಯತ ಧರ್ಮದಲ್ಲಿದ್ದುಕೊಂಡು ದೂರ ಉಳಿದವರೆಲ್ಲರನ್ನು ಒಗ್ಗೂಡಿಸಿ ಯಶಸ್ವಿ ಸಮಾವೇಶಕ್ಕೆ ಎಲ್ಲರೂ ಯತ್ನಿಸೋಣ ಹಾಗೂ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಲಿಂಗಾಯತಸ್ವತಂತ್ರ ಧರ್ಮವಾದಲ್ಲಿ ಸಿಗುವ ಸೌಲತ್ತುಗಳ ಕುರಿತು ಸಹೋದರರಿಗೆ ತಿಳಿಸಿ ಹೇಳಿ, ಅವರನ್ನು ಜತೆಗೆ ಕರೆಯುವ ನಿಟ್ಟಿನ ಪ್ರಮುಖ ಕಾರ್ಯ ನಮ್ಮಿಂದ ಆಗಬೇಕಿದೆ ಎಂದು ಹೇಳಿದರು.

ಲಿಂಗಾಯತಸ್ವತಂತ್ರ ಧರ್ಮ ಪಡೆಯಲು ನಮ್ಮಲ್ಲಿ ತತ್ವವಿದೆ. ಧರ್ಮದ ಮಾನ್ಯತೆಗಾಗಿ ಇರುವ ವಚನ ಸಾಹಿತ್ಯವಿದೆ. ಧರ್ಮಗ್ರಂಥ, ಧರ್ಮಗುರು ಎಲ್ಲವೂ ಇದೆ. ಹೀಗಾಗಿ ಜಿಲ್ಲೆಯ ಮಠಾಧೀಶರು ತಮ್ಮ ಗ್ರಾಮಗಳಲ್ಲಿರುವ ಭಕ್ತರಿಗೆ

ತಿಳಿ ಹೇಳುವುದರ ಜತೆಗೆ ಔರಾದ್ ತಾಲೂಕಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯಿತರನ್ನು ಸೇರಿಸಲು ಶ್ರಮಿಸಬೇಕು ಎಂದರು.

 

ಭಾರತೀಯ ಬಸಳ ಬಗಳದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಪ್ರಾಸ್ತವಿಕ ಮಾತನಾಡಿದರು. ಡಾ. ವೈಜಿನಾಥ ಬುಟ್ಟೆ, ರವೀಂದ್ರ ಮೀಸೆ, ಬಂಡೆಪ್ಪ ಕಂಟೆ, ಪ್ರಕಾಶ ಘೂಳೆ, ಕಲ್ಲಪ್ಪ ದೇಶಮುಖ, ಶರಣಪ್ಪ ಪಂಚಾಕ್ಷರಿ, ಚಂದ್ರಕಾಂತ ನಿರ್ಮಳೆ, ಗುಂಡಯ್ಯ ಸ್ವಾಮಿ, ಶಿವಕುಮಾರ ಘಾಟೆ, ಚನ್ನಪ್ಪ ಉಪ್ಪೆ, ದಯಾನಂದ ಹಳ್ಳಿಖೇಡೆ, ಮಲ್ಲಿಕಾರ್ಜುನ ಟಂಕಸಾಲೆ, ಶರಣಪ್ಪ ಪಾಟೀಲ್, ಸಿದ್ದಪ್ಪ ಮೂಲಗೆ, ಗುರುನಾಥ ದೇಶಮುಖ, ಬಸವರಾಜ ಹಳ್ಳೆ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಪದಾಧಿಕಾರಿಗಳು ಪಾಲ್ಗೊಂಡರು. ಶಿವಶರಣಪ್ಪ ವಲ್ಲೇಪೂರೆ ಸ್ವಾಗತಿಸಿ, ನಿರೂಪಿಸಿದರು.

 

ಒಗ್ಗಟ್ಟು ಪ್ರದರ್ಶನ

 

ಸಭೆಯಲ್ಲಿ ಲಿಂಗಾಯತ ಸಮಾಜದ ನಾನಾ ಸಂಘಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿ ಗಮನ ಸೆಳೆದರು. ಸಭೆಯಲ್ಲಿ ಹಿರಿಯ ವೈದ್ಯ ಡಾ. ವೈಜಿನಾಥ ಬುಟ್ಟೆ ಮಾತನಾಡಿ, ಸಮಾಜದ ಯುವಕರಿಗೆ ಹುರಿದುಂಬಿಸಿದರು. ಯುವಕರು ಸಮಾವೇಶ ಯಶಸ್ವಿ ಮಾಡೋಣ ಎಂದು ಸಂಕಲ್ಪ ಮಾಡಿದರು.

 

 

ಯತ್ನಾಳ ಹೇಳಿಕೆಗೆ ಕಿಡಿ

 

ಬಸವಣ್ಣನವರು ಕೈಲಾಗದವರಂತೆ, ಕೊನೆಗೆ ಕೈಚೆಲ್ಲಿ ಪ್ರಾಣ ಬಿಟ್ಟರು. ಅವರಂತೆಯೇ ಸಮಾಜದವರೆಲ್ಲ ಹೊಳೆಗೆ ಹಾರಿ’ ಎನ್ನುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಅಕ್ಷಮ್ಯ’ ಎಂದು ಕಿಡಿ ಕಾರಿದರು. ಬಿಜೆಪಿ ವರಿಷ್ಠರು ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಿದರು.

error: Content is protected !!