ಬೀದರ-ಕಮಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಪ್ರಭು ಚವ್ಹಾಣ ಗರಂ

ಬೀದರ-ಕಮಲನಗರ ರಾಷ್ಟ್ರೀಯ ಹೆದ್ದಾರಿ-50 ಕಾಮಗಾರಿ ಕಳಪೆಯಾಗಿರುವ ಬಗ್ಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ್ದಾರೆ. ಕಾಮಗಾರಿ ನಿರ್ವಹಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಿಡಿ ಕಾರಿದ್ದು, ಲೋಕೋಪಯೋಗಿ ಸಚಿವರು ಖುದ್ದಾಗಿ ಭೇಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

 

ಕಾಮಗಾರಿ ಕಳಪೆಯಾಗಿ ಮಾಡಿರುವುದರಿಂದ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದಿದ್ದು, ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅಧಿಕಾರಿಗಳು ಗುತ್ತಿಗೆದಾರರು ಸೇರಿ ಸರ್ಕಾರದ ಹಣವನ್ನು ಹಾಳು ಮಾಡಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

 

2018ರಲ್ಲಿ ಆರಂಭವಾದ ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿವರೆಗೆ ಸುಮಾರು 3೦೦ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 13೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 5೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪ್ರಕರಣಗಳು ಕೂಡ ದಾಖಲಾಗಿವೆ. ಹಾಗಾಗಿ ಸಚಿವರು ಖುದ್ದಾಗಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಬೇಕು. ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

 

ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಬೀದರ-ಕಮಲನಗರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆಯಾಗಿರುವುದು ನಿಜ.‌ ಕಾಮಗಾರಿಯ ಡಿಫೆಕ್ಟ್‌ ಲಿಯಾಬಿಲಿಟಿ ಅವಧಿ 2026ರ ಜೂನ್‌ ವರೆಗೆ ಇದ್ದು, ಕೆಲಸ ಮಾಡಿದ ಗುತ್ತಿಗೆದಾರರಿಂದಲೇ 2025ರ ಜನವರಿ ಅಂತ್ಯದೊಳಗಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು. ಅವಕಾಶವಿದ್ದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು. ಖುದ್ದಾಗಿಯೂ ಕಾಮಗಾರಿ ಪರಿಶೀಲಿಸುವುದಾಗಿ ಭರವೆ ನೀಡಿದರು.

 

ಹೊಸ ತಾಲ್ಲೂಕು ಕೇಂದ್ರವಾಗಿರುವ ಕಮಲನಗರದ ಜನತೆ ಜಿ್ಲ್ಲಾ ಕೇಂದ್ರಕ್ಕೆ ಸಂಚರಿಸಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಸಾಕಷ್ಟು ಪ್ರಯತ್ನ ವಹಿಸಿ ಕಾಮಗಾರಿ ಮಂಜೂರು ಮಾಡಿಸಿದ್ದೇನೆ. 396.96 ಕೋಟಿ ಅಂದಾಜು ಮೊತ್ತದಲ್ಲಿ ಕೆಲಸವಾಗಿದೆ. ಆರಂಭದಿಂದಲೂ ಕಾಮಗಾರಿಯ ಗುಣಮಟ್ಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಪತ್ರಿಕೆ, ಸುದ್ದಿವಾಹಿನಿಗಳಲ್ಲಿ ಸಾಕಷ್ಟು ವರದಿಗಳಾಗಿವೆ. ನಾನು ಸಾಕಷ್ಟು ಸಲ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸರಿಯಾಗಿ ಕೆಲಸ ಮಾಡುವಂತೆ ತಿಳಿಸಿದ್ದೇನೆ. ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮನಬಂದಂತೆ ಕೆಲಸ ಮಾಡಿದ್ದಾರೆ. ಸಚಿವರಿಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ. 54.37 ಕಿ.ಮೀ ಉದ್ದದ ರಸ್ತೆ ಆರಂಭದಿಂದ ಕೊನೆವರೆಗೆ ಸಂಪೂರ್ಣ ಕೆಟ್ಟು ಹೋಗಿದೆ. ಒಂದೆರಡು ಕಡೆಗಳಲ್ಲಿ ಕೆಟ್ಟಿದ್ದರೆ ದುರಸ್ತಿ ಮಾಡಬಹುದು. ಆದರೆ ಸಂಪೂರ್ಣ ರಸ್ತೆ ಹಾಳಾಗಿರುವುದರಿಂದ ದುರಸ್ತಿಯಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ‌. ಹಾಗಾಗಿ ಪುನಃ ರಸ್ತೆ ನಿರ್ಮಿಸಬೇಕೆಂದು ಸಚಿವರಿಗೆ ತಿಳಿಸಿದ್ದೇನೆ. ರಸ್ತೆ ಸರಿಯಾಗುವ ವರೆಗೆ ಸುಮ್ಮನಿರುವುದಿಲ್ಲ ಎಂದು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.

 

ವರದಿ : ರಾಚಯ್ಯ ಸ್ವಾಮಿ 

error: Content is protected !!