ಸಿ.ಟಿ.ರವಿಯನ್ನು ತಕ್ಷಣ ಎಂಎಲ್ಸಿ ಸ್ಥಾನದಿಂದ ವಜಾಗೊಳಿಸಿ:ವಿಮೆನ್ ಇಂಡಿಯ ಮೂವ್ಮೆಂಟ್ ಒತ್ತಾಯ

ಪರಿಷತ್ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿರುವುದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ.ಇದು ಇಡೀ ಮಹಿಳಾ ಕುಲಕ್ಕೆ ಮಾಡಿದ ಅವಮಾನವಾಗಿದ್ದು ನಾಗರಿಕ ಸಮಾಜ ಇದನ್ನು ಪಕ್ಷಾತೀತವಾಗಿ ಖಂಡಿಸಬೇಕಿದೆ,

ಈ ಘಟನೆಯು ಸಮಾಜದಲ್ಲಿ ಸಾಮಾನ್ಯ ಮಹಿಳೆಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಚಿವ ಸಂಪುಟದ ಪ್ರಭಾವಿ ಸಚಿವೆಯೊಬ್ಬರ ಸ್ಥಿತಿ ಹೀಗಿದ್ದರೆ ಸಾಮಾನ್ಯ ಮಹಿಳೆಯ ಸ್ಥಿತಿಯು ಹೇಗಿರಬಹುದು ಎಂಬುದನ್ನು ಊಹಿಸಬಹುದು.ಸಂಘ ಪರಿವಾರದ ನಾಯಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ವೇಳೆ ಸರಕಾರ ಮುಂದೆ ನಿಂತು ರಕ್ಷಿಸದೆ ಕಠಿಣ ಕಾನೂನು ಕ್ರಮ ಕೈಗೊಂಡಿದ್ದರೆ ಈ ಘಟನೆ ಮರುಕಳಿಸುತ್ತಿರಲಿಲ್ಲ.

ಮಹಿಳೆಯನ್ನು ಬರೀ ಭೋಗದ ವಸ್ತುವಾಗಿ ಕಾಣುವ ಕೀಳು ಮನಸ್ಥಿತಿಯಿಂದ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ.

ಸಂವಿಧಾನ ಬದಲಾಯಿಸುವುದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ, ಮಹಿಳೆಯರಿಗೆ ಸಮಾನ ಅವಕಾಶಗಳನ್ನು- ಹಕ್ಕುಗಳನ್ನು ನೀಡುವ ಸಂವಿಧಾನದ ಕರ್ತೃ ಅಂಬೇಡ್ಕರ್ ರನ್ನು ಅವಮಾನಿಸುವ , ಮನುವಾದವನ್ನು ವೈಭವಿಕರಿಸುವ ಪಕ್ಷದ ಓರ್ವ ಸದಸ್ಯನಾಗಿದ್ದುಕೊಂಡು ಸಿಟಿ ರವಿಯಿಂದ ಇದಕ್ಕಿಂತಲೂ ಉತ್ತಮವಾದದ್ದನ್ನು ನಿರೀಕ್ಷಿಸುವುದು ಮೂರ್ಖತನ.

ಸರಕಾರ ಮಹಿಳೆಯರಿಗೆ ಬರೀ ತಾತ್ಕಾಲಿಕ ಯೋಜನೆಗಳನ್ನು ನೀಡಿ ಮರಳು ಮಾಡಿದರೆ ಸಾಲದು. ಜೊತೆಗೆ ಸಮಾನ ಹಕ್ಕು, ಗೌರವದ ಬದುಕು,ಘನತೆಯ ಜೀವನ ನಡೆಸಲು ಅವಕಾಶ ಒದಗಿಸಿ ಕೊಡಬೇಕಾಗಿದೆ. ಮಹಿಳಾ ಭದ್ರತೆಗೆ ಆದ್ಯತೆ ನೀಡಬೇಕು.

ವಿಧಾನ ಪರಿಷತ್ತಿನ ಸಭಾಪತಿಯವರು ಸಿ.ಟಿ. ರವಿಯನ್ನು ತಕ್ಷಣ ಎಂಎಲ್ಸಿ ಸ್ಥಾನದಿಂದ ವಜಾಗೊಳಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಮೆನ್ ಇಂಡಿಯಾ ಮೂಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಸ್ರಿಯ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ನಸ್ರಿಯಾ ಬೆಳ್ಳಾರೆ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಹಿದಾ ತಸ್ನೀಂ ರಾಜ ಉಪಾಧ್ಯಕ್ಷೆ, SDPI ಕರ್ನಾಟಕ, ನೌರೀನ್ ಆಲಂಪಾಡಿ ಜಿಲ್ಲಾಧ್ಯಕ್ಷೆ ದಕ್ಷಿಣ ಕನ್ನಡ, ನಿಶಾ ವಾಮಂಜೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಕ್ಷಿಣ ಕನ್ನಡ, ಶಮೀಮ ತುಂಬೆ ಜಿಲ್ಲಾ ಸಮಿತಿ ಸದಸ್ಯೆ ದಕ್ಷಿಣ ಕನ್ನಡ ಸೇರಿದಂತೆ ಇತರರು ಇದ್ದರು.

error: Content is protected !!