ಔರಾದ್ : ಸಾಕಷ್ಟು ತೊಂದರೆಗಳ ನಡುವೆಯೂ ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡುವ ಮೂಲಕ ದೇಶದ ಮೊದಲ ಶಿಕ್ಷಕಿಯಾಗಿ ಕೆಲಸ ಮಾಡಿದ ಸಾವಿತ್ರಿಬಾಯಿ ಫುಲೆ ಮಹಿಳೆಯರ ಪ್ರಗತಿ ಮತ್ತು ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ ಎಂದು ನಿವೃತ್ತ ಶಿಕ್ಷಕ ಸಿದ್ದರಾಮಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ತಾಲೂಕು ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಿದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಕಾಲ ಕಳೆಯುವ ಸ್ಥಿತಿಯಲ್ಲಿ ಅವರನ್ನು ಹೊರಗಡೆ ಬರುವಂತೆ ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ವೈಚಾರಿಕ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ ಎಂದರು.
ಸಂಪನ್ಮೂಲ ಶಿಕ್ಷಕ ಧನರಾಜ ಮಾನೆ ಮಾತನಾಡಿ, ಸಮಾಜದಲ್ಲಿ ಬೇರೂರಿದ ಸತಿ ಸಹಗಮನ, ಕೇಶಮುಂಡನ, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಹೋರಾಡಿದ ದಿಟ್ಟ ಮಹಿಳೆ ಫುಲೆ ಅವರಾಗಿದ್ದು, ಅವರಿಂದ ನಡೆದ ಶೈಕ್ಷಣಿಕ ಕ್ರಾಂತಿ ಪ್ರಪಂಚದಲ್ಲಿ ಮಾದರಿ ಎಂದರು.
ಸಮನ್ವಯ ಸಮಿತಿಯ ಅಧ್ಯಕ್ಷ ರಾಜಕುಮಾರ ಡೊಂಗ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್.ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣ ಪಾಟೀಲ್, ರಮೇಶ ಪಾಟೀಲ್, ಬಾಲಾಜಿ ಅಮರವಾಡಿ ಸೇರಿದಂತೆ ಇನ್ನಿತರರಿದ್ದರು.
ವರದಿ : ರಾಚಯ್ಯ ಸ್ವಾಮಿ