ಯಾರೀ ಶಬರಿಮಲೆಯ ವಾವರ ಸ್ವಾಮಿ..?
ಶಬರಿ ಮಲೆ ಅಯ್ಯಪ್ಪ ಮಾಲಾಧಾರಿಗಳಿಗೆ ಮಕರ ಸಂಕ್ರಮಣದ “ಮಕರವಿಳಕ್ಕ್” ನೋಡುವುದು ಅತ್ಯಂತ ಪ್ರಮುಖ ಆಚರಣೆಯಾಗಿರುತ್ತದೆ.ಅದರೊಂದಿಗೆ ಅವರ ನಲ್ವತ್ತೆಂಟು ದಿನಗಳ ವೃತಾಚರಣೆ ಮುಗಿಯುತ್ತದೆ.
ಪ್ರತೀಯೊಬ್ಬ ಅಯ್ಯಪ್ಪ ಮಾಲಾಧಾರಿಯೂ ಶಬರಿ ಮಲೆಯ ಪಕ್ಕವೇ ಇರುವ ವಾವರ ಸ್ವಾಮಿಯ ಸಮಾಧಿಯಿರುವ ಮಸೀದಿಗೆ ಭೇಟಿ ಕೊಟ್ಟು ಕಾಣಿಕೆ ಹಾಕಿ ಬರುವುದು ಅವರ ಆಚರಣೆಯ ಪ್ರಮುಖ ಅಂಗಗಳಲ್ಲೊಂದು.ಅದೇನೂ ಇಂದು ನಿನ್ನೆ ಆರಂಂಭವಾದ ಆಚರಣೆಯಲ್ಲ.ಅಯ್ಯಪ್ಪ ವೃತಾಚರಣೆ ಮಾಡಿ ಶಬರಿ ಮಲೆಗೆ ತೀರ್ಥ ಯಾತ್ರೆ ಹೋಗುವ ಹಿಂದೂ ಆಧ್ಯಾತ್ಮಿಕ ಯಾವಾಗ ಆರಂಭವಾಯಿತೋ ಅಂದಿನಿಂದಲೇ ವಾವರ ಸ್ವಾಮಿಯ ಸಮಾಧಿ ಸಂದರ್ಶನವೂ ಆರಂಭವಾಗಿದೆ.ಹಾಗಾದರೆ ಇದಕ್ಕೊಂದು ಹಿನ್ನೆಲೆಯಿರಲೇಬೇಕಲ್ಲವೇ..? ಆ ಹಿನ್ನೆಲೆಯೇನೆಂದು ನೋಡೋಣ.
ಅಯ್ಯಪ್ಪ ಸ್ವಾಮಿಯ ಬಾಲ್ಯದ ಹೆಸರು ಮಣಿಕಂಠ.ಮಣಿಕಂಠ ಚಿಕ್ಕ ಬಾಲಕನಾಗಿದ್ದಾಗಲೇ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾನೆ.ತಂದೆ ಬೇರೊಂದು ಮದುವೆಯಾಗುತ್ತಾರೆ.ಅಲ್ಲಿಂದ ಬಾಲಕ ಮಣಿಕಂಠನ ಸಂಕಷ್ಟದ ದಿನಗಳು ಆರಂಭವಾಗುತ್ತವೆ.ಮಲತಾಯಿ ಬಾಲಕ ಮಣಿಕಂಠನನ್ನು ಶೋಷಣೆ ಮಾಡುತ್ತಾಳೆ.ಅದು ಮುಂದುವರಿದು ಮಾನಸಿಕ ಹಿಂಸೆಗೆ ತಿರುಗುತ್ತದೆ. ಅದೊಂದು ದಿನ ಬಾಲಕ ಮಣಿಕಂಠನನ್ನು ಮನೆಯಿಂದ ಹೊರಹಾಕುತ್ತಾಳೆ. ಇನ್ನು ನೀನು ಮನೆಗೆ ಬರಬೇಕಾದರೆ ಹುಲಿಯ ಹಾಲು ಹಿಡ್ಕೊಂಡು ಬರಬೇಕೆಂಬ ಕಟ್ಟಪ್ಪಣೆ ವಿಧಿಸುತ್ತಾಳೆ. ಇದು ಅಸಾಧ್ಯ ಕೆಲಸ. ಹುಲಿಯ ಹಾಲು ಕರೆಯುವುದು ಮನುಷ್ಯ ಮಾತ್ರನಿಗೆ ಸಾಧ್ಯವೇ..?
ಹುಲಿಯ ಹಾಲು ಹೇಗೆ ಕರೆಯುವುದಪ್ಪಾ ಎಂದು ಚಿಂತಾಕ್ರಾಂತನಾಗಿ ಬಾಲಕ ಮಣಿಕಂಠ ಕಾಡಿನಲ್ಲಿ ನಡೆಯುತ್ತಿರುತ್ತಾನೆ. ಕಾಡಿನ ಮಧ್ಯೆ ಏಕಾಂತದಲ್ಲಿ ವಾವರ ( ಬಾಬರ್) ಎನ್ನುವ ಸೂಫಿ ಸಂತರೊಬ್ಬರು ಧ್ಯಾನ ನಿರತರಾಗಿರುತ್ತಾರೆ. ಅವರು ಕ್ರೂರ ಪ್ರಾಣಿಗಳು ಸಂಚರಿಸುವ ದಟ್ಟ ಕಾಡಿನಲ್ಲಿ ನಡೆಯುತ್ತಿರುವ ಪುಟ್ಟ ಬಾಲಕ ಮಣಿಕಂಠನನ್ನು ನೋಡಿ ಆಶ್ಚರ್ಯಚಕಿತರಾಗಿ ಬಾಲಕನನ್ನು ಕರೆಯುತ್ತಾರೆ.ಕರೆದು ನಿನ್ನ ಕತೆಯೇನಪ್ಪಾ.? ಈ ದಟ್ಟ ಕಾಡಿನಲ್ಲೇಕೆ ಏಕಾಂಗಿಯಾಗಿ ನಡೆಯುತ್ತಿರುವೆ ಎಂದು ವಿಚಾರಿಸುತ್ತಾರೆ. ಬಾಲಕ ಮಣಿಕಂಠ ತನ್ನ ಕತೆಯನ್ನು ಸೂಫಿ ಸಂತ ವಾವರ ಸ್ವಾಮಿಯ ಮುಂದೆ ಬಿಚ್ಚಿಡುತ್ತಾನೆ.ಮಣಿಕಂಠನ ಕತೆ ಕೇಳಿ ನೊಂದ ವಾವರ ಸ್ವಾಮಿ ಕಾಡಿನಲ್ಲಿರುವ ಹುಲಿಯೊಂದನ್ನು ಕೈ ಸನ್ನೆ ಮಾಡಿ ಕರೆಯುತ್ತಾರೆ.ಆ ಕಾಡಿನ ಕ್ರೂರ ಮೃಗಗಳೆಲ್ಲವೂ ಸೂಫಿ ಸಂತರಿಗೆ ಅಧೀನವಾಗಿರುತ್ತವೆ.ಹುಲಿ ಕೂಡಲೇ ಬಂದು ವಾವರ ಸ್ವಾಮಿಯ ಮುಂದೆ ಬಂದು ನಿಲ್ಲುತ್ತದೆ.ಬಾಲಕ ಮಣಿಕಂಠನಲ್ಲಿ ” ನೀನು ಈ ಹುಲಿಯ ಮೇಲೆ ಸವಾರಿ ಮಾಡುತ್ತಾ ನಿನ್ನ ಮನೆಯತ್ತ ಹೋಗು” ಎನ್ನುತ್ತಾರೆ. ವಾವರ ಸ್ವಾಮಿಯ ಕರಾಮತ್ನಿಂದ ( ಅದ್ಭುತ ಆಧ್ಯಾತ್ಮ ಸಿದ್ಧಿ) ಹುಲಿ ಮಣಿಕಂಠನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಆತನ ಮನೆಯತ್ತ ಹೋಗುತ್ತದೆ. ಈ ಅದ್ಭುತ ದೃಶ್ಯವನ್ನು ಕಂಡು ಮಣಿಕಂಠನ ಮಲತಾಯಿ ದಂಗಾಗಿ ಬಿಡುತ್ತಾಳೆ.
ಮುಂದೆ ಇದೇ ಬಾಲಕ ಮಣಿಕಂಠ ಸಂಪೂರ್ಣವಾಗಿ ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುತ್ತಾನೆ.ಅದೇ ಬಾಲಕ ಮುಂದೆ ಅಯ್ಯಪ್ಪ ಸ್ವಾಮಿಯಾಗಿ ಪ್ರಸಿದ್ಧರಾಗುತ್ತಾರೆ.
ಹೀಗೆ ತನ್ನನ್ನು ಸಂತೈಸಿ ತನಗೆ ದಾರಿ ತೋರಿದ ವಾವರ ಸ್ವಾಮಿಯನ್ನು ಅಯ್ಯಪ್ಪ ಸ್ವಾಮಿ ಬಹುವಾಗಿ ಗೌರವಿಸುತ್ತಾರೆ. ಅಯ್ಯಪ್ಪ ಸ್ವಾಮಿ ಮತ್ತು ವಾವರ ಸ್ವಾಮಿಯ ಈ ಆತ್ಮೀಯ ಸಂಬಂಧದ ಸ್ಮರಣೆಗಾಗಿ ಅಯ್ಯಪ್ಪ ಮಾಲಾಧಾರಿಗಳು ಶಬರಿ ಮಲೆ ಏರುವ ಮುನ್ನ ಸೂಫಿ ಸಂತ ವಾವರ ಸ್ವಾಮಿಯ ಮಸೀದಿಗೆ ಭೇಟಿ ಕೊಟ್ಟು ಅವರ ಸಮಾಧಿ ಸಂದರ್ಶಿಸಿ ಅಲ್ಲಿ ಕಾಣಿಕೆ ಹಾಕುವ ಪದ್ಧತಿ ತಲೆತಲಾಂತರಗಳಿಂದ ಚಾಲ್ತಿಯಲ್ಲಿದೆ.