ಶಾಲಾ ಮುಖ್ಯಗುರು, ಚಾಲಕರಿಗೆ ಆಟೋ ಚಾಲಕರಿಗೆ ಕಾರ್ಯಾಗಾರ

ಚಾಲಕರಿಗೆ ಕಾನೂನು ಪಾಠ ಹೇಳಿದ ಪೊಲೀಸರು 

 

ಔರಾದ್ : ತಾಲೂಕಿನ ಸಂತಪೂರ ಹೋಬಳಿಯ ಚಾಲಕರಿಗೆ ಪೊಲೀಸರು ಕಾನೂನು ಪಾಠ ಮಾಡಿದರು. ಈಚೇಗೆ ದೀಪಾಲಯ ಶಾಲೆಯಲ್ಲಿ ಕರೆಯಲಾಗಿದ್ದ ಶಾಲಾ-ಕಾಲೇಜುಗಳ ವಾಹನ ಚಾಲಕರಿಗೆ ಹಾಗೂ ಆಟೋ ಚಾಲಕರಿಗಾಗಿ ಹಮ್ಮಿಕೊಂಡ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಸಿಪಿಐ ರಘುವೀರಸಿಂಗ್ ಠಾಕೂರ್, ಪೊಲೀಸರಂತೆ ಖಾಕಿ ಬಟ್ಟೆಧರಿಸಿರುವ ಚಾಲಕರಿಗೂ ಕೂಡ ಸಮಾಜದ ಜವಾಬ್ದಾರಿಗಳಿವೆ. ಸಮಾಜದಲ್ಲಿ ಕೇವಲ ಪೊಲೀಸರಿಗೆ ಮಾತ್ರ ಜವಾಬ್ದಾರಿಗಳಿಲ್ಲ, ನಮ್ಮಂತೆ ಖಾಕಿ ಬಟ್ಟೆಹಾಕಿರುವ ನಿಮಗೂ ಕೂಡ ಹಲವಾರು ಜವಾಬ್ದಾರಿಗಳಿವೆ. ನಾವು ನೀವು ಇಬ್ಬರೂ ಕೂಡ ಕಾನೂನಿನ ಪರಿಪಾಲಕರು. ಯಾವುದೇ ರೀತಿ ಅಪರಾಧಗಳು ನಡೆಯುವ ವಿಷಯ ನಿಮಗೆ ತಿಳಿಯುತ್ತಿದ್ದಂತೆಯೇ ಪೊಲೀಸರಿಗೆ ಮಾಹಿತಿ ನೀಡಿ ಮುಂದೆ ಆಗುವ ಸಮಸ್ಯೆಗಳನ್ನು ತಡೆಯಬೇಕು ಎಂದು ಹೇಳಿದರು.

ಸಂಚಾರಿ ನಿಯಮಗಳನ್ನು ಎಲ್ಲಾ ರೀತಿಯ ವಾಹನ ಸವಾರರು, ಚಾಲಕರು ತಪ್ಪದೆ ಪಾಲಿಸಬೇಕು. ಮುಖ್ಯವಾಗಿ ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು ಎಂದು ಕಿವಿಮಾತು ಹೇಳಿದರು.

ಹೆಲ್ಮೆಟ್ ಜೀವರಕ್ಷಕ ಎಂಬುದು ಸತ್ಯ. ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಕಾರಣದಿಂದ ಹಲವಾರು ಜೀವಗಳು ಉಳಿದಿರುವ ನಿದರ್ಶನಗಳು ಸಾಕಷ್ಟಿವೆ. ಹೀಗಾಗಿ ಹೆಲ್ಮೆಟ್ ಬಗ್ಗೆ ಸವಾರರು ನಿರ್ಲಕ್ಷ್ಯ ಮಾಡಬಾರದು. ಸಂಚಾರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಭಯಕ್ಕೆ ಅಥವಾ ದಂಡ ಕಟ್ಟಬೇಕು ಎಂಬ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್ ಬಳಸಬಾರದು. ವಾಹನ ಚಾಲನೆ ಮಾಡುವಾಗ ಯಾವುದೇ ಪರಿಸ್ಥಿತಿಗಳು ಎದುರಾದರೂ ಶಿರಸ್ತ್ರಾಣವು ನಮ್ಮ ಪ್ರಾಣವನ್ನು, ತಮ್ಮ ಕುಟುಂಬವನ್ನು ರಕ್ಷಿಸುತ್ತದೆ ಎಂಬುದನ್ನು ಸದಾ ಮನದಲ್ಲಿಟ್ಟುಕೊಂಡು ಧರಿಸಬೇಕು ಎಂದರು.

ಪಿಎಸ್ ಐ ನಂದಕುಮಾರ ಮೂಳೆ ಮಾತನಾಡಿ, ಮಾದಕ ವಸ್ತುಗಳ ಸೇವೆನೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ದುಷ್ಕರ್ಮಿಗಳು ವಿದ್ಯಾರ್ಥಿಗಳ ಅಮಾಯಕತೆಯನ್ನು ಉಪಯೋಗಿಸಿಕೊಂಡು ಅವರನ್ನು ಮಾದಕ ವಸ್ತುಗಳ ಜಾಲಕ್ಕೆ ಕೆಡವುತ್ತಿದ್ದಾರೆ. ಇಂತಹ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ನಿಗಾ ವಹಿಸಬೇಕು. ಇಂತಹ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಸದಾ ಪೊಲೀಸ್‌ ಇಲಾಖೆಯ ತುರ್ತು ಸೇವೆ ನಂಬರ್‌ ಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಅನಾಹುತಗಳು ನಡೆದಾಗ ಪೊಲೀಸರಿಗೆ ದೂರವಾಣಿ ಮೂಲಕ ಕರೆ ಮಾಡಬೇಕು. ಕರೆ ಮಾಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಎಎಸ್ ಐ ಸುನಿಲಕುಮಾರ ಕೋರಿ, ಶಾಲೆಯ ಮುಖ್ಯಗುರು ಪ್ರೀತಿ, ರಾಮರಡ್ಡಿ, ತ್ರಿಂಬಕ ಪಾಟೀಲ್, ಸಿದ್ದಣ್ಣಾ, ಚಿರಂಜೀವಿ ಪಾಟಿ, ರಾಜೇಶ್, ಅನಿಲಕುಮಾರ ಸೇರಿದಂತೆ ಶಾಲೆಯ ವಿದ್ಯಾರ್ಥಿ, ಸಿಬ್ಬಂದಿಗಳು ಪಾಲ್ಗೊಂಡರು.

ಮನಬಂದಂತೆ ಮಕ್ಕಳನ್ನು ತುಂಬೋದು ಅಪರಾಧ

ಅಪರಿಚಿತ ವ್ಯಕ್ತಿಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ಮನ ಬಂದಂತೆ ಶಾಲಾ ಮಕ್ಕಳನ್ನು ಆಟೋದಲ್ಲಿ ಸಾಗಿಸುವುದು ಕಾನೂನಿನ ರೀತಿ ಅಪರಾಧ. ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಶಾಲಾ ಮಕ್ಕಳ ಸಾಗಣೆ ಆಟೋದಲ್ಲಿ ಬೇಡ ಎಂದು ತಿಳಿ ಹೇಳಿದರು. ಇನ್ನೂ ಶಾಲೆಯ ವಾಹನಗಳು ಕಾನೂನು ನಿಯಮ ಪಾಲಿಸಬೇಕು. ಕೆಲವರು ಇನ್ಶೂರೆನ್ಸ್ ಮಾಡುತ್ತಿಲ್ಲ. ವಾಹನ ಸುಸ್ಥಿತಿಯಲ್ಲಿರಬೇಕು ಎಂದು ಎಚ್ಚರಿಕೆ ನೀಡಿದರು,

 

ನಿಯಮಗಳ ಜಾಗೃತಿ

 

ವಾಹನವು ಪರ್ಮಿಟ್‌ ಹೊಂದಿರಬೇಕು. ಎಲ್ಲ ದಾಖಲಾತಿಗಳು ಸಮರ್ಪಕವಾಗಿರಬೇಕು. 15 ವರ್ಷಗಳಿಗಿಂತ ಹಳೆಯ ವಾಹನ ಆಗಿರಬಾರದು. ಸ್ಪೀಡ್‌ ಗವರ್ನರ್‌ ಅಳವಡಿಸಿರಬೇಕು. 40 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಚಲಿಸಲು ಅವಕಾಶವಿರಬಾರದು. ಇರುವ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಸಾಗಿಸಬಾರದು. ಬ್ಯಾಗಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇರಬೇಕು. ವಾಹನ ವಿಮಾ ರಕ್ಷಣೆ ಹೊಂದಿರಬೇಕು. ಪ್ರಾಥಮಿಕ ಚಿಕಿತ್ಸೆ ಸಾಧನಗಳನ್ನು ಅಳವಡಿಸಿರಬೇಕು. ಸಿಸಿ ಟಿವಿ ಕಡ್ಡಾಯವಾಗಿ ಹಾಕಬೇಕು. ವಾಹನ ಹಳದಿ ಬಣ್ಣ ಹೊಂದಿರಬೇಕು. ವಾಹನದ ಹಿಂದೆ ಮತ್ತು ಮುಂದೆ ಶಾಲಾ ವಾಹನ ಎಂದು ದಪ್ಪ ಅಕ್ಷರದಲ್ಲಿ ಬರೆದಿರಬೇಕು. ಉಳಿದ ಎರಡು ಕಡೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು. ಮಕ್ಕಳನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಿ ಪಾಲಕರಿಗೆ ಒಪ್ಪಿಸಲು ವಾಹನದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಚಾಲಕನಿಗೆ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯ. ಆತನ ವಿರುದ್ಧ ಅಪಘಾತದ ದೂರು ದಾಖಲಾಗಿರಬಾರದು. ಕುಡಿದು ಚಾಲನೆ ಮಾಡಿದ ಬಗ್ಗೆ ದಂಡ ಕಟ್ಟಿರಬಾರದು ಎಂದು ಶಾಲೆಯ ಮುಖ್ಯಗುರುಗಳಿಗೆ ಹಾಗೂ ಚಾಲಕರಿಗೆ ಸಿಪಿಐ ರಘುವೀರಸಿಂಗ್ ಠಾಕೂರ್ ಜಾಗೃತಿ ಮೂಡಿಸಿದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!