ಮಂಗ’ನಾಟಕ್ಕೆ ಬೇಸ್ತು ಬಿದ್ದ Sri Lanka: ದೇಶಾದ್ಯಂತ ವಿದ್ಯುತ್ ವ್ಯತ್ಯಯ.. ಇಷ್ಟಕ್ಕೂ ಆಗಿದ್ದೇನು?

ಕೊಲಂಬೋ: ಶ್ರೀಲಂಕಾಗೂ ಕೋತಿಗೂ ಬಿಡದ ನಂಟು.. ಇತಿಹಾಸದಲ್ಲಿ ಅಂದರೆ ರಾಮಾಯಣದಲ್ಲಿ ಭಾರತದಿಂದ ಹೋದ ಕೋತಿ (ಹನುಮಂತ)ಯೊಂದು ಇಡೀ ಲಂಕೆಗೆ ಬೆಂಕಿ ಇಟ್ಟ ಕಥೆ ಕೇಳಿರಬಹುದು.. ಅಂತೆಯೇ ಇದೀಗ ಮತ್ತೆ ಶ್ರೀಲಂಕಾ ಕೋತಿಯಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದೆ.

ಇಡೀ ಶ್ರೀಲಂಕಾದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯಾಪಕ ವ್ಯತ್ಯಯವಾಗಿದ್ದು, ಇದಕ್ಕೆ ಕೋತಿಯೊಂದು ಕಾರಣ ಎಂದು ಹೇಳಲಾಗಿದೆ. ಶ್ರೀಲಂಕಾದಲ್ಲಿ ಭಾನುವಾರ ಕೊಲಂಬೊ ಉಪನಗರದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್ ಗೆ ಸಿಲುಕಿದ ಪರಿಣಾಮ ಆ ದೇಶಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ವಿದ್ಯುತ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸಮಯ ಬೆಳಿಗ್ಗೆ 11:30 ರ ಸುಮಾರಿಗೆ ಇಡೀ ಗ್ರಿಡ್ ವಿಫಲವಾಗಿದ್ದು, ಇಡೀ ದೇಶಾದ್ಯಂತ ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಲವಾರು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ವಿದ್ಯುತ್ ಸರಬರಾಜು ಪ್ರಕ್ರಿಯೆ ಪುನಃಸ್ಥಾಪಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಈ ಸಮಸ್ಯೆಯಿಂದಾಗಿ ಶ್ರೀಲಂಕಾದ ಕೆಲವು ಪ್ರದೇಶಗಳಲ್ಲಿ ಐದು ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಂಡಿದ್ದವು ಎಂದು ಅಧಿಕಾರಿ ಹೇಳಿದರು.

ಏನಾಯ್ತು?

ಶ್ರೀಲಂಕಾದ ಪಣದುರದಲ್ಲಿರುವ ವಿದ್ಯುತ್ ಗ್ರಿಡ್‌ನ ಸಬ್‌ಸ್ಟೇಷನ್‌ನಲ್ಲಿ ಕೋತಿಯೊಂದು ಗ್ರಿಡ್ ಸಿಲುಕಿತ್ತು. ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತವಾಯಿತು. ವಿದ್ಯುತ್ ವ್ಯತ್ಯಯದ ಒಂದು ಗಂಟೆಯ ನಂತರ ರಾಜ್ಯ ವಿದ್ಯುತ್ ಘಟಕವು ರಾಷ್ಟ್ರೀಯ ಆಸ್ಪತ್ರೆ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ವಿದ್ಯುತ್ ಅನ್ನು ಪುನಃಸ್ಥಾಪಿಸಿದೆ ಎಂದು ವಿದ್ಯುತ್ ಸಚಿವ ಕುಮಾರ ಜಯಕೋಡಿ ಮಾಧ್ಯಮಗಳಿಗೆ ತಿಳಿಸಿದರು.

ವಿದ್ಯುತ್ ಸರಬರಾಜು ವ್ಯತ್ಯಯ ಕುಡಿಯುವ ನೀರಿನ ಸರಬರಾಜಿನ ಮೇಲೂ ಪರಿಣಾಮ ಬೀರಬಹುದು ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು.

error: Content is protected !!