ಚಿತ್ತಾಪುರ: ಮುಸ್ಲಿಂ ಸಮುದಾಯದವರು ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು
ಮುಸ್ಲಿಂ ಸಮುದಾಯದವರು ಕಳೆದ 30 ದಿನಗಳಿಂದ ರಂಜಾನ್ ಹಬ್ಬದ ಪ್ರಯುಕ್ತ ರೋಜಾ ಉಪವಾಸವನ್ನು ಮಾಡುವುದರ ಮೂಲಕ ಪ್ರತಿನಿತ್ಯ ಬೆಳಗ್ಗೆ ಸಂಜೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ರವಿವಾರ ಸಂಜೆಯಿಂದಲೇ ರಂಜಾನ್ ಆಚರಣೆಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದರಲ್ಲೂ, ರವಿವಾರ ಇಡೀ ರಾತ್ರಿ ಮುಸ್ಲಿಂ ಬಾಂಧವರು ಜಾಗರಣೆ ಆಚರಿಸುವ ಮೂಲಕ ಸೋಮವಾರ ಹಬ್ಬವನ್ನು ಆದರದಿಂದ ಬರ ಮಾಡಿಕೊಂಡರು ಸೋಮವಾರ ಬೆಳಗ್ಗೆ ವಿಧಿ-ವಿಧಾನಗಳನ್ನು ಪೂರೈಸಿ ತಮ್ಮ ಸಮೀಪದ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಇಸ್ಲಾಂ ಸಮುದಾಯದ ಪವಿತ್ರ ಹಬ್ಬ ಎಂದೇ ಕರೆಯಲಾಗುವ ರಂಜಾನ್ ಪ್ರಯುಕ್ತ ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಧರಿಸಿ ಭರ್ಜರಿ ಭೋಜನ ಸಿದ್ಧಪಡಿಸಿಟ್ಟು ನೆರೆ ಹೊರೆ, ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗಳಿಗೆ ಆಮಂತ್ರಿಸಿ ಸುರಕುಂಬಾ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳು ಉಣಬಡಿಸಿ ಸಂತೋಷಪಟ್ಟರು
ಪಟ್ಟಣದ ಕಿಂಗ್ ಪ್ಯಾಲೇಸ್ ಹಿಂದುಗಡೆ ಇರುವ ಮಜೀದ್ ಎ ಐಲೇ ಹದೀಸ್ ಮರ್ಕಜ್ ಈದ್ಗಾ, ಶಿಶು ವಿಹಾರ ಶಾಲೆಯ ಹತ್ತಿರದ ಈದ್ಗಾ, ಬಾಹರಪೇಟ್ ಈದ್ಗಾ ಹಾಗೂ ಚಿತ್ತಾವಲಿ ದರ್ಗಾದಲ್ಲಿ ಮುಸ್ಲಿಂರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವರದಿ ಮೊಹಮ್ಮದ್ ಆಲಿ ಚಿತ್ತಾಪುರ