ಗುಡಿಸಲು ವಾಸದಿಂದ ನಮಗೆ ಮುಕ್ತಿ ಕೊಡಿಸಿ ಮೇಡಂ.!
ಔರಾದ್ : ಸರಕಾರಕ್ಕೆ ಎಲ್ಲರ ಸಮಸ್ಯೆ ಬಗೆಹರಿಸಲು ಆಗುತ್ತದೆ. ಆದರೆ ನಮ್ಮ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಗುಡಿಸಲು ವಾಸದಿಂದ ನಮಗೆ ಮುಕ್ತಿ ಕೊಡಿಸಿ ಮೇಡಂ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರ ಮುಂದೆ ಅಲೆಮಾರಿ ಜನರು ತಮ್ಮ ನೋವು ತೋಡಿಕೊಂಡರು.
ಶುಕ್ರವಾರ ಪಟ್ಟಣದ ಅಲೆಮಾರಿ ಜನರ ಸಮಸ್ಯೆ ಆಲಿಸಲು ಭೇಟಿ ನೀಡಿದ ವೇಳೆ, ಅನೇಕರು ಬಂದು ಹೋಗುತ್ತಿದ್ದಾರೆ ಆದರೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.
ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡುವ ಮೂಲಕ ವಸತಿ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.
ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ ಅಧಿಕಾರಿಗಳು ಅಲೆಮಾರಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ನೀವುಗಳು ಅವರ ಕುಡಿಸಲುಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ಸೂಚಿಸಿದರು. ಪಟ್ಟಣ ಸರ್ವೇ ನಂ. 183, 205 ರಲ್ಲಿ ನಿವೇಶನ ಮಂಜುರಾಗಿದೆ. ಆದರೆ 183 ರಲ್ಲಿ ಮಾಡಲು ತೊಂದರೆ ಏನು ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತನೆ ಎಂದು ಭರವಸೆ ನೀಡಿದರು.
ಮಕ್ಕಳು, ವೃದ್ಧರು ಗಬ್ಬು ವಾಸನೆಯಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದೇವೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ವೃದ್ಧೆ ಸೋನಾಬಾಯಿ ಮಾತನಾಡಿ ‘ನಾವು ಸುಮಾರು 30 ವರ್ಷಗಳಿಂದ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಸರಕಾರದ ಸೌಲಭ್ಯಗಳನ್ನು ಸಹ ನಮಗೆ ನೀಡುತ್ತಿಲ್ಲ. ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕುವಂತಹ ಪರಿಸ್ಥತಿಯಿದೆ. ಇಲ್ಲಿಯವರೆಗೆ ಜನರಿಗೆ ಜಾತಿ ಪ್ರಮಾಣಪತ್ರ ಇಲ್ಲ. ಜಾತಿ ಪ್ರಮಾಣ, ಆಧಾರ ಕಾರ್ಡ್, ಪರಿತರ ಚೀಟಿಗಾಗಿ ಕಚೇರಿಗೆ ಸುತ್ತಾಡಿದ್ದೇವೆ. ಆದರೆ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
ಮುಖಂಡ ಅನಿಲ ನಿರ್ಮಳೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ಹೆಚ್ ಎಸ್ ಅವರು ಒಮ್ಮೆಯಾದರೂ ಅಲೆಮಾರಿ ಜನಾಂಗ ವಾಸಸ್ಥಾನಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀವುಗಳು ಬಂದಾಗ ಮಾತ್ರ ಇವರು ಬರುತ್ತಾರೆ. ಇಲ್ಲವಾದಲ್ಲಿ ಯಾರು ಬರುವದಿಲ್ಲ ಎಂದು ದೂರಿದರು. ಬಸವರಾಜ ಶೆಟಕಾರ ಮಾತನಾಡಿ, ಅನೇಕ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಇವರಿಗೆ ಒಂದು ಸೂರು ಕೊಡಿ ಎಂದು ಒತ್ತಾಯಿಸಿದರು. ಬಸವರಾಜ ಶೆಟಕಾರ ಮಾತನಾಡಿ, ಅನೇಕ ದಶಕಗಳಿಂದ ಅಲೆಮಾರಿ ಜನರ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಕುಡಲೇ ಸಮಸ್ಯೆ ಬಗೆಹರಿಸಿ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ನಾನು ಕುಡಾ ಒಬ್ಬ ಅಲೆಮಾರಿ ಜನಾಂಗಕ್ಕೆ ಸೇರಿದವಳು. ನನಗೆ ಕಷ್ಟದ ಅರಿವಿದೆ ಎಂದ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಅಧಿಕಾರಿಗಳು ಮೂಲಸೌಕರ್ಯ ನೀಡಬೇಕು ಎಂದು ಸ್ಥಳದಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದರು. ಅಲೆಮಾರಿ ಜನಾಂಗದವರಿಗೆ ವಿದ್ಯುತ್ ವ್ಯವಸ್ಥೆ ಮಾಡುವಂತೆ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಅವರಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅವರು ಖಾಸಗಿ ನಿವೇಶನದಲ್ಲಿದ್ದಾರೆ. ಆದ್ದರಿಂದ ವಿದ್ಯುತ್ ಸಂಪರ್ಕ ನೀಡಲು ಬರುವದಿಲ್ಲ. ಸೋಲಾರ್ ಲೈಟ್ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಆಪ್ತ ಸಹಾಯಕ ಆನಂದಕುಮಾರ,
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ಹೆಚ್ ಎಸ್, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲದೊಡ್ಡೆ, ಸಿಡಿಪಿಒ ಇಮಲಪ್ಪ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಬಿಆರ್ ಸಿ ಪ್ರಕಾಶ ರಾಠೋಡ, ನಾಗನಾಥ ವಾಕೋಡೆ, ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ ಸೇರಿದಂತೆ ಅನೇಕರಿದ್ದರು.
ಮೊಬೈಲ್ ಬ್ಲಾಕ್ ಆಕ್ರೋಶ
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ಹೆಚ್ ಎಸ್ ಅವರು ಕಚೇರಿಗೆ ತೆರಳಿದರೂ ನಮಗೆ ಸ್ಪಂದಿಸುವದಿಲ್ಲ ಎಂದು ಅಲೆಮಾರಿ ಜನಾಂಗದವರು ನೋವು ತೋಡಿಕೊಂಡರು. ಮೊಬೈಲ್ ಕರೆ ಮಾಡಿದರೆ ಬ್ಲಾಕ್ ಮಾಡುತ್ತಾರೆ ಎಂದು ಸ್ಥಳದಲ್ಲಿದ್ದ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.