ದಲಿತ ಯುವಕನ ಕೊಲೆ ಸಿಪಿಐ(ಎಮ್) ಖಂಡನೆ

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಸಿಪಿಐ(ಎಮ್) ಪ್ರಭಟನೆ ಹಾಗೂ ಮನವಿ.

ಕ್ಷೌರ ಮಾಡುವ ವಿಚಾರದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿ ಯುವಕ ಯಮನೂರಪ್ಪರವರ ಕೊಲೆ ಜಾತಿ, ದೌರ್ಜನ್ಯ ಹಾಗೂ ಅಸ್ಪೃಶ್ಯತೆಗೆ ಕರಾಳ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಘಟನೆಯನ್ನು ಸಿಪಿಐ(ಎಮ್) ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಕೊಲೆಯಾದವನ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಬೇಕೆಂದು ಸಿಪಿಐ(ಎಮ್) ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಮ್)ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಎಮ್.ಜೈನೆಖಾನ್ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷವಾದರೂ ಇನ್ನೂವರೆಗೆ ಅಸ್ಪೃಶ್ಯತೆಯ ಆಚರಣೆಗಳು ನಡೆಯುತ್ತಲಿವೆ ಹಾಗೂ ಜಾತಿ ಆಧಾರಿತ ತಾರತಮ್ಯಗಳು ಅಡೆತಡೆಯಿಲ್ಲದೆ ರಾಜಾರೋಷವಾಗಿ ನಡೆದಿವೆ ಎಂದು ವಿಷಾದವ್ಯಕ್ತಪಡಿಸಿದರು. ಸಾವಿರಾರು ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನರಿಗೆ ಕ್ಷೌರ ನಿರಾಕರಣೆ ಅಭಾದಿತವಾಗಿ ಮುಂದುವರೆದಿದೆ. ಎಷ್ಟೋ ಜನ ನಗರ ಪ್ರದೇಶಗಳಿಗೆ ಹೋಗಿ ಕ್ಷೌರ ಮಾಡಿಕೊಂಡು ಬರುವ ಪರಿಸ್ಥಿತಿ ಬಂದಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕು. ದಲಿತರಿಗೆ ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಜೈನಖಾನ್ ಒತ್ತಾಯಿಸಿದರು.

ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ನಾಗಪ್ಪ ಸಂಗೊಳ್ಳಿ, ತುಳಸಮ್ಮ ಮಾಳದಕರ, ಮೀನಾಕ್ಷಿ ಸಂತಿ, ರಾಚವ್ವ ರಾಮದುರ್ಗ, ಫಾರೂಖ್ ಶೇಖ್ ಮುಂತಾದವರು ಭಾಗವಹಿಸಿದ್ದರು.

ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ

error: Content is protected !!