ಮಂಡ್ಯ : ಸಂಚಾರಿ ಪೊಲೀಸರ ಎಡವಟ್ಟಿನಿಂದಾಗಿ ಬೈಕ್ನಲ್ಲಿ ಪೋಷಕರೊಂದಿಗೆ ಹೋಗುತ್ತಿದ್ದ ಮೂರು ವರ್ಷದ ಮಗು ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್-ವಾಣಿ ದಂಪತಿಯ ಮಗಳು ಹೃತೀಕ್ಷಾಳಿಗೆ ನಾಯಿ ಕಚ್ಚಿದ್ದರಿಂದ ಇಂದು ಬೆಳಗ್ಗೆ ಚಿಕಿತ್ಸೆಗಾಗಿ ಬೈಕ್ನಲ್ಲಿ ಕರೆದುಕೊಂಡು ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗುತ್ತಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯ ಸ್ವರ್ಣಸಂದ್ರ ಬಳಿ ಸಂಚಾರಿ ಪೊಲೀಸರು ಇವರ ಬೈಕ್ನ್ನು ಏಕಾಏಕಿ ಅಡ್ಡಗಟ್ಟಿದಾಗ ನಿಯಂತ್ರಣ ತಪ್ಪಿ ಮೂವರು ಬೈಕ್ನಿಂದ ಬಿದ್ದಿದ್ದಾರೆ. ಆ ವೇಳೆ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಕಣ್ಣ ಮುಂದೆಯೇ ಮಗಳು ಸಾವನ್ನಪ್ಪಿರುವುದನ್ನು ಕಂಡು ಪೋಷಕರು ಗೋಳಾಡಿದ್ದಾರೆ.
ಸಾರ್ವಜನಿಕರ ಆಕ್ರೋಶ: ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಸಂಚಾರಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.