ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿದ್ಯಾಚೇತನ ಶಾಲಾ ಅವರಣದಲ್ಲಿ ನೂತನವಾಗಿ ನಿರ್ಮಿಸಿದ ಗುರುಭವನ ಉದ್ಘಾಟನೆ ಕಾರ್ಯಕ್ರಮ ಜು. 12ರಂದು ಮಧ್ಯಾಹ್ನ 1.30ಕ್ಕೆ ಜರುಗಲಿದೆ ಎಂದು ಬಿಇಒ ಆರ್.ಟಿ. ಬಳಿಗಾರ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಸಾವಿರ ಚ.ಅಡಿ ವಿಸ್ತೀರ್ಣದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಗುರುಭವನ ನಿರ್ಮಿಸಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ 35 ಲಕ್ಷ ರೂ. ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಉಳಿದ ಹಣವನ್ನು ತಾಲೂಕಿನ ಎಲ್ಲ ಶಿಕ್ಷಕರಿಂದ ವಂತಿಕೆ ಸಂಗ್ರಹಿಸಲಾಗಿದೆ. ಯಾವುದೇ ಸರಕಾರದ ಅನುದಾನ ಬಳಸದೇ ಕೇವಲ 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ”, ಎಂದು ಹೇಳಿದರು.
“ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕರ ಕುಟುಂಬದವರು ನೀಡಿದ ದೇಣಿಗೆಯಿಂದ 19 ಲಕ್ಷ ರೂ. ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಇರುವ ಪರಿಕರ ಖರೀದಿಸಲಾಗಿದೆ”, ಎಂದು ತಿಳಿಸಿದರು. ”ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಗುರುಭವನ ಉದ್ಘಾಟಿಸುವರು. ಬಿಇಒ ಆರ್.ಟಿ. ಬಳಿಗಾರ ಅಧ್ಯಕ್ಷತೆ ವಹಿಸುವರು. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸವಿತಾ ಧೂತ, ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲಿಲಾವತಿ ಹಿರೇಮಠ, ಬಸವರಾಜ ನಲವತ ವಾಡ, ಎಸ್.ಬಿ. ಕೋಳಿ, ಮಹಮ್ಮದ್ ಸಬೂರ್, ಪುರಸಭೆ ಸದಸ್ಯ ನಾಗರಾಜ ಕಟ್ಟಿಮನಿ ಅತಿಥಿಗಳಾಗಿ ಆಗಮಿಸಲಿದ್ದಾರೆ”, ಎಂದು ತಿಳಿಸಿದರು.
ವರದಿ- Md ಸೋಹಿಲ ಭೈರಕದರ ಜೆಕೆ ನ್ಯೂಸ ಕನ್ನಡ ರಾಮದುರ್ಗ