ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಶಾಂತಿಯುತ ಧರಣಿ ಹೋರಾಟ ಆರಂಭಿಸಲು ಸಜ್ಜಾಗಿದ್ದಾರೆ.
ಗುಡಸ ಗ್ರಾಮದ ದಲಿತ ಸಮುದಾಯದವರು ಕಳೆದ 35-40 ವರ್ಷಗಳಿಂದ ಸರ್ಕಾರಿ ಗಾಯರಾಣ ಭೂಮಿಯಲ್ಲಿ ಜಾತ್ಯಾತೀತವಾಗಿ ವಾಸವಿದ್ದು, ದನಕರುಗಳಿಗೆ ಮೇಯಲು ಹಾಗೂ ಕೃಷಿ ಚಟುವಟಿಕೆಗಳ ಮೂಲಕ ತಮ್ಮ ಜೀವನ ನಡೆಸುತ್ತಿದ್ದಾರೆ. 258 ಎಕರೆ ಪ್ರದೇಶ ಖಾಲಿಯಿರುವ ಈ ಭೂಮಿಯಿಂದ ಯಾವುದೇ ಸಾರ್ವಜನಿಕ ಹಾನಿಯೂ ಉಂಟಾಗಿಲ್ಲ.
ಆದರೆ ಇತ್ತೀಚೆಗೆ ಕೆಲ ವ್ಯಕ್ತಿಗಳು ಈ ಪ್ರದೇಶದ ಮೇಲಿನ ಆಧಿಪತ್ಯಕ್ಕೆ ಸಂಬಂಧಿಸಿ ಜಾತಿ ನಿಂದನೆ, ಮೌಖಿಕ ಅವಮಾನ ಹಾಗೂ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ನಿನ್ನೆ ರಾತ್ರಿ ಕೂಡ ಇದೇ ರೀತಿಯ ಅಪಮಾನಕಾರಿ ಘಟನೆ ನಡೆದಿದ್ದು, ಸಮುದಾಯದಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ದಲಿತ ಮುಖಂಡರು:
“ಇದು ಕೇವಲ ನಮ್ಮ ಹಕ್ಕಿಗಾಗಿ ಹೋರಾಟ. ನಾವು ಶಾಂತಿಯುತವಾಗಿ ಈ ಭೂಮಿಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಇತ್ತೀಚಿನ ಘಟನೆಗಳು ನಮ್ಮನ್ನು ನೋಯಿಸಿವೆ. ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.”
ಇಂದು, ದಲಿತ ಸಮುದಾಯದ ಪ್ರಮುಖರು ಹುಕ್ಕೇರಿ ತಹಶೀಲ್ದಾರ್ ಹಾಗೂ ಸಿಪಿಐ ಅಧಿಕಾರಿಗಳಿಗೆ ಭೇಟಿ ನೀಡಿ ಘಟನೆ ಕುರಿತು ವಿವರ ನೀಡಿ, ಶಾಂತಿ ಸಭೆ ನಡೆಸಬೇಕು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು:
ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕಾಪಾಡಬೇಕು
ಜಾತಿ ನಿಂದನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ
ಗಾಯರಾಣ ಭೂಮಿಯಲ್ಲಿ ವಾಸವಿರುವ ದಲಿತರಿಗೆ ಹಕ್ಕು ಕಾಯ್ದುಕೊಳ್ಳಲು ಅವಕಾಶ
ಯಾವುದೇ ತೊಂದರೆ ಇಲ್ಲದೆ ವಾಸಿಸಲು ಸರ್ಕಾರದಿಂದ ಅನುಮತಿ
ಹೋರಾಟದ ಎಚ್ಚರಿಕೆ:
“ಇದು ಕೇವಲ ಗುಡಸವಷ್ಟೆ ಅಲ್ಲ, ಇಡೀ ತಾಲೂಕಿನಲ್ಲಿ ಇದಕ್ಕಿಂತಲೂ ಭಯಾನಕ ಅತಿಕ್ರಮಣಗಳಿವೆ. ನಮ್ಮ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚೆ ಎಲ್ಲೆಡೆ ಸಮಾನವಾದ ನೀತಿ ಅನ್ವಯಿಸಬೇಕು. ಇಲ್ಲವಾದರೆ ನಾಳೆಯಿಂದ ಧರಣಿ ಹಾಗೂ ಗೆರಾವ್ ಚಳವಳಿಗೆ ನಾವು ಸಿದ್ಧ.”
ಈ ಸಂದರ್ಭದಲ್ಲಿ ಶ್ರೀಕಾಂತ ತಳವಾರ, ಕೆಂಪಣ್ಣ ಶಿರಹಟ್ಟಿ, ಯಮನಪ್ಪ ಕಾಂಬಳೆ, ಮಾರುತಿ ಕಾಂಬಳೆ, ಶಿವಾನಂದ ಮಾಳಕರಿ, ಮಂಜು ಕಾಮತ, ಸಾವಿತ್ರಿ ಬಂಗಾರಿ ಮತ್ತು ಅನೇಕ ದಲಿತ ಮುಖಂಡರು ಈ ಸಂದರ್ಭ ಹಾಜರಿದ್ದರು. ಶಾಂತತೆಯೊಂದಿಗೆ ನ್ಯಾಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆಂದು ಅವರ ಮನವಿ.
ವರದಿ : ಸದಾನಂದ ಎಂ