ಬೆಂಗಳೂರು : ನಗರ ಪೊಲೀಸ್ ಇಲಾಖೆಯ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿ.ಸಿ.ಬಿ) ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯವರು ಸೈಬರ್ ವಂಚನೆಗೆ ಒಳಗಾಗಿರುವ ನಾಗರಿಕರಿಗೆ ನಕಲಿ ಆನ್‌ಲೈನ್ ಕಾನೂನು ಸೇವೆ ಒದಗಿಸುತ್ತಿದ್ದ ದೊಡ್ಡ ಸೈಬರ್ ಅಪರಾಧ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ಈ ಕಾರ್ಯಾಚರಣೆಯನ್ನು 2025ರ ಫೆಬ್ರವರಿ 12ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ಮೂಲಕ ಬಂದ ಮಾಹಿತಿಯ ಆಧಾರದಲ್ಲಿ ದಾಖಲಾದ ದೂರಿನ ಮೇಲೆ ಪ್ರಾರಂಭಿಸಲಾಯಿತು. ದೂರಿನಲ್ಲಿ, ಪಿರ್ಯಾದುದಾರರಿಗೆ ಸೋಲಾರ್ ಪ್ಲಾಂಟ್ ಆಳವಡಿಸುವುದಾಗಿ ಆಮಿಷವೊಡ್ಡಿ * 15 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾಗಿ ಹೇಳಲಾಗಿತ್ತು. ಈ ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಕಾನೂನು ನೆರವು ಹುಡುಕುತ್ತಿರುವಾಗ, ಪಿರ್ಯಾದುದಾರನು “quickmoto legal service” ಎಂಬ ವೆಬ್ ಸೈಟ್ ಅನ್ನು ಪತ್ತೆಹಚ್ಚಿದರು. ಅಲ್ಲಿಂದ ಸ್ವಯಂಘೋಷಿತ ಪ್ರತಿನಿಧಿಗಳಾದ ಹಲವಾರು ಟೆಲಿಕಾಲರ್‌ಗಳು ಸಂಪರ್ಕಿಸಿ, ಕಾನೂನು ಸೇವೆ ಒದಗಿಸುವುದಾಗಿ ಭರವಸೆ ನೀಡಿದರು. ಅವರ ಮಾತುಗಳಿಗೆ ನಂಬಿಕೆ ಇಟ್ಟು, ಪಿರ್ಯಾದುದಾರನು * 12.5 ಲಕ್ಷವನ್ನು ಹಂತ ಹಂತವಾಗಿ ವರ್ಗಾಯಿಸಿದರು. ಆದರೆ ಈ ಕಂಪನಿಯೇ ನಕಲಿಯಾಗಿತ್ತು.
ಈ ಪ್ರಕರಣವನ್ನು ಸಿಸಿಬಿ, ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಿ ತನಿಖೆ ನಡೆಸಲಾಯಿತು. ಶ್ರೀ ಅಜಯ್ ಹಿಲೋರಿ, ಐ.ಪಿ.ಎಸ್ ಜಂಟಿ ಪೊಲೀಸ್ ಆಯುಕ್ತರು (ಅಪರಾಧ) ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ತನಿಖೆಯ ವೇಳೆ “quickmoto legal” ಕಂಪನಿಯು ವಿಳಾಸದಲ್ಲಿ ಇಲ್ಲದೆ ಇರುವುದು ಬೆಳಕಿಗೆ ಬಂದಿತು. ಮುಂದಿನ ವಿಚಾರಣೆಯಲ್ಲಿ ಬೆಂಗಳೂರು ನಗರ ಕಸ್ತೂರಿನಗರದಲ್ಲಿ “India Legal Service” ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಪತ್ತೆಯಾಯಿತು.
ಪ್ರಾಥಮಿಕ ತನಿಖೆಯಲ್ಲಿ, ಹಲವಾರು ಟೆಲಿಕಾಲರ್‌ಗಳನ್ನು ನೇಮಿಸಲಾಗಿದ್ದು, Zoiper-5 ಎನ್ನುವ VoIP (Voice over Internet Protocol) ಆಧಾರಿತ ಅಪ್ಲಿಕೇಶನ್ ಬಳಸಿ ಸೈಬರ್ ವಂಚನೆ ಬಲಿಯಾಗಿರುವ ನಾಗರಿಕರನ್ನು ಕರೆಮಾಡಲಾಗುತ್ತಿತ್ತು ಎಂಬುದು ಗೊತ್ತಾಯಿತು. ಕಾಲ್ ಸೆಂಟರ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ವ್ಯಕ್ತಿಯನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ ಆರೋಪಿಯ ಸಹೋದರ ದುಬೈನಲ್ಲಿ ಇರುವವನಾಗಿದ್ದು, ಹಲವಾರು ನಕಲಿ ಕಂಪನಿಗಳನ್ನು ಸ್ಥಾಪಿಸಿ ಆನ್‌ಲೈನ್ ವಂಚನೆ ನಡೆಸಲು ಸಾಂದರ್ಭಿಕ ಜಾಲವೊಂದನ್ನು ನಿರ್ಮಿಸಿದ್ದನು ಎಂಬುದು ಬಹಿರಂಗವಾಯಿತು. “India Legal” ಎನ್ನುವ ನಕಲಿ ಕಂಪನಿಯನ್ನು ಕಸ್ತೂರಿನಗರದಲ್ಲಿ ಸ್ಥಾಪಿಸಿ, ಅಲ್ಲಿ 12 ಟೆಲಿಕಾಲರ್‌ಗಳನ್ನು ನೇಮಿಸಿ ಸೈಬರ್ ವಂಚನೆಗೊಂಡವರಿಗೆ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದರು.
ಈ ಪ್ರಕರಣದ ಪ್ರಮುಖ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, 7 ದಿನಗಳ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಕಾಲ್ ಸೆಂಟರ್‌ನಲ್ಲಿ ಜರುಗಿದ ಶೋಧ ಕಾರ್ಯದಲ್ಲಿ. 1) 10 ಕಂಪ್ಯೂಟರ್‌ಗಳ ಹಾರ್ಡ್ ಡಿಸ್ಕ್ಗಳು, 2) 7 ನಕಲಿ ಕಂಪನಿಗಳ ಸೀಲ್‌ಗಳು. 3) ಬಾಡಿಗೆ ಒಪ್ಪಂದಪತ್ರಗಳು, 4) ಚೆಕ್ ಬುಕ್‌ಗಳು ಮತ್ತು ಇತರೆ ದಾಖಲೆಗಳು, 5) 1 ಮೊಬೈಲ್ ಫೋನ್, 6) 1 ಸಿಪಿಯು, 7) 11 ವೋಡಾಫೋನ್ ಸಿಮ್ ಕಾರ್ಡ್‌ಗಳು ಸೇರಿದಂತೆ SIP ಟ್ರಂಕ್ ಸರ್ವರ್ ವ್ಯವಸ್ಥೆಯ ಡೇಟಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಸಂಸ್ಥೆಯು ಕೋಟ್ಯಾಂತರ ರೂಪಾಯಿಗಳ ಅಕ್ರಮ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದು ದೃಢಪಟ್ಟಿದೆ. ಭಾರತದೆಲ್ಲೆಡೆ 29ಕ್ಕೂ ಹೆಚ್ಚು ಪ್ರಕರಣಗಳು ಈ ಜಾಲದ ವಿರುದ್ಧ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ನಲ್ಲಿ ದಾಖಲಾಗಿವೆ.
ಈ ಜಾಲದಲ್ಲಿ ತೊಡಗಿರುವ ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಶ್ರೀ ರಾಜಾ ಇಮಾಮ್ ಕಾಸಿಂ, ಅಪರಾಧ ವಿಭಾಗದ ಡಿಸಿಪಿ-2 ಅವರ ನೇತೃತ್ವದಲ್ಲಿ ದೂರಸಂಪರ್ಕ ಇಲಾಖೆಯ ತಾಂತ್ರಿಕ ನೆರವಿನೊಂದಿಗೆ ಹಾಗೂ ಟಾಟಾ ಟೆಲಿಸರ್ವಿಸಸ್ ಸಹಯೋಗದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯ ನಡೆಯಿತು.
ಈ ಸಮಗ್ರ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ರವರು ರೂಪಿಸಿದ್ದು, ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಶ್ರೀ ಅಜಯ್ ಹಿಲೋರಿ ಅವರ ನೇತೃತ್ವದಲ್ಲಿ ಮತ್ತು ಡಿಸಿಪಿ ಕ್ರೈಂ-2 ಶ್ರೀ ರಾಜಾ ಇಮಾಮ್ ಕಾಸಿಂ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದೆ. ಈ ತಂಡದಲ್ಲಿ ಸಂತೋಷ್ ರಾಮ್, ಉಮೇಶ್ ಕುಮಾರ್, ಪಿಎಸ್‌ಐ ಕುಬೇರ್, ಪಿಎಸ್‌ಐ ಅಶ್ವಿನಿ, ಎಎಸ್‌ಐ ಶಾಂತಕುಮಾರ್, ವಣರಾಜ್, ನವೀನ್, ಶ್ರೀದೇವಿ ಮತ್ತು ತಾಂತ್ರಿಕ ತಜ್ಞರಾದ ಸುನಿಲ್ ಮತ್ತು ಕಿರಣ್ ತೇಲಿ ಇದ್ದರು.