ಬೆಳಗಾವಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ರಾಜ್ಯದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಆಡಳಿತಾತ್ಮಕ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನು ರಚಿಸುವಂತೆ ವಿವಿಧ ಮಠಾಧೀಶರು, ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನಿಯೋಗ ಹಾಗೂ ಜನಪ್ರತಿನಿಧಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಳಗಾವಿ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ವಿಭಜಿಸಿ, ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನು ರಚಿಸಲು ಈಗಾಗಲೇ ಆಯೋಗಗಳು ಶಿಫಾರಸ್ಸು ಮಾಡಿರುವುದನ್ನು ಮನವಿ ವೇಳೆ ಸ್ಮರಿಸಲಾಗಿದ್ದು, ಚಿಕ್ಕೋಡಿ ಮತ್ತು ಗೋಕಾಕ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿದರು.
ಈ ಸಂಬಂಧ ಜಿಲ್ಲೆಯ 18 ಶಾಸಕರನ್ನು ಕರೆದು ಅವರ ಅಭಿಪ್ರಾಯ ಪಡೆದು ಶೀಘ್ರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆಯನ್ನು ನೀಡಿದ್ದಾರೆ.
ವರದಿ : ಸದಾನಂದ ಎಂ
