ಔರಾದ(ಬಿ) : ವಿಧಾನಸಭಾ ಕ್ಷೇತ್ರದಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಗಳನ್ನು ಕಳಪೆಯಾಗಿ ಮಾಡಿದ್ದು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಜೆಜೆಎಂ ಯೋಜನೆಯ ಅನುಷ್ಠಾನ ಕುರಿತಂತೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವರು ಲಿಖಿತವಾಗಿ ಉತ್ತರಿಸಿದ್ದು, ಔರಾದ(ಬಿ) ಮತಕ್ಷೇತ್ರದಲ್ಲಿ 276 ಕಾಮಗಾರಿಗಳು ಕೈಗೊಳ್ಳಲಾಗಿದೆ. 12 ಕಾಮಗಾರಿಗಳು ಕಳಪೆಯಾಗಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಔರಾದ(ಬಿ) ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಲ್ಲಿ 15 ರಿಂದ 20 ಪ್ರತಶತ ಕೆಲಸಗಳು ಮಾತ್ರ ಸರಿಯಾಗಿ ನಡೆದಿದೆ. ಉಳಿದಂತೆ ಎಲ್ಲ ಕಾಮಗಾರಿಗಳು ಕಳಪೆಯಾಗಿವೆ. ಅಧಿಕಾರಿಗಳು ವಾಸ್ತವ ಸಂಗತಿಯನ್ನು ಬಚ್ಚಿಟ್ಟು ಸುಳ್ಳು ಮಾಹಿತಿ ಒದಗಿಸಿದ್ದಾರೆ ಎಂದು ಶಾಸಕರು ಕಿಡಿ ಕಾರಿದ್ದಾರೆ.
ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಬೇಸಿಗೆ ಅವಧಿಯಲ್ಲಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಹಿಂದೆ ಸಚಿವನಾಗಿದ್ದಾಗ ಬಹಳಷ್ಟು ಪರಿಶ್ರಮಪಟ್ಟು 250 ಕೋಟಿಗೂ ಹೆಚ್ಚಿನ ಅನುದಾನ ತರಲಾಗಿದೆ. ಕ್ಷೇತ್ರದ ಎಲ್ಲ ಗ್ರಾಮ ಮತ್ತು ತಾಂಡಾಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಸಂಪೂರ್ಣ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ಜನರಿಂದ ದೂರುಗಳು ಬರುತ್ತಿವೆ.
ಕೆಲವೊಂದು ಗ್ರಾಮಗಳಲ್ಲಿ ನೀರು ಸರಬರಾಜು ಆಗದಿದ್ದರೂ ಕೂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಮೀಷ ನೀಡಿ ಹರ್ ಘರ್ ಜಲ್ ಘೋಷಣೆ ಮಾಡಿರುವುದು ಕಂಡುಬಂದಿದೆ. ಸಚಿವರು ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪರಿಶೀಲಿಸದೇ ಒದಗಿಸಿದ್ದಾರೆ. ಕಾಮಗಾರಿಯ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೆ ಈವರಗೆ ಯಾವುದೇ ಕ್ರಮವಾಗಿಲ್ಲ.
ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಿ ಕಾಮಗಾರಿ ಸರಿಪಡಿಸುವಂತೆ ಕೋರಲಾಗಿದೆ. ಇದು ಕುಡಿಯುವ ನೀರಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು ಕಾಮಗಾರಿ ಸರಿಪಡಿಸುವ ವರೆಗೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ
