ವಿಜಯಪುರ : ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಸ್ವಯಂಪ್ರೇರಿತವಾಗಿ ಧ್ವನಿ ಎತ್ತುವುದು ಪ್ರತಿಯೊಬ್ಬ ಹಿಂದೂಗಳ ಕರ್ತವ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಧರ್ಮ ಕಾರ್ಯ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
ಬಿಜೆಪಿ ಕಾರ್ಯಾಲಯದಲ್ಲಿ ಬಬಲೇಶ್ವರದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂಗಳು ನಾವೆಲ್ಲರೂ ಒಂದಾಗಬೇಕು, ಹಿಂದೂಗಳ ವಿರುದ್ಧ ಅನ್ಯಾಯವಾದರೆ ಅದನ್ನು ಪ್ರತಿಭಟಿಸಬೇಕು, ಉಳಿದ ಧರ್ಮಿಯರಿಗೆ ಅನ್ಯಾಯವಾದರೆ ಅದರಲ್ಲೂ ಬೇರೆ ದೇಶದಲ್ಲಿಯೂ ಅನ್ಯಾಯವಾದರೂ ಅವರು ಇಲ್ಲಿ ಪ್ರತಿಭಟನೆ ಮಾಡುತ್ತಾರೆ, ಆದರೆ ನಾವೆಲ್ಲ ಹಿಂದೂಗಳು ಹಿಂದೂಗಳ ವಿರುದ್ಧ ಅನ್ಯಾಯವಾದರೆ ಸುಮ್ಮನೆ ಮನೆಯಲ್ಲಿ ಕೂರಬಾರದು, ಕೆಲವರು ಮಾತನಾಡುವುದರಿಂದ ಹಿಂದೂ ಧರ್ಮದ ಸಂಘಟನೆಯಾಗುವುದಿಲ್ಲ, ನಾವೆಲ್ಲರೂ ಸ್ವಯಂಪ್ರೇರಿತವಾಗಿ ಹಿಂದೂ ಪರವಾಗಿ ಗಟ್ಟಿ ಧ್ವನಿಯಾಗಬೇಕು, ಆಗ ಹಿಂದೂಗಳ ರಕ್ಷಣೆ ಸಾಧ್ಯ ಎಂದರು.
ಬಬಲೇಶ್ವದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಯಶಸ್ವಿಗೊಳಿಸಲು ಹಿಂದೂಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕೆಲವು ಸ್ವಾಮೀಜಿಗಳು ಹಿಂದೂ ಸಂಸ್ಕೃತಿ, ಹಿಂದೂ ದೇವಾನುದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಲ್ಲದು, ಇನ್ನೂ ಹಿಂದೂ ಧರ್ಮದ ರಕ್ಷಣೆ, ಕೃಷಿಕರ ಹಿತರಕ್ಷಣೆಗಾಗಿ ತಮ್ಮ ಜೀವನವೇ ಮುಡುಪಾಗಿರಿಸಿರುವ ಕನೇರಿ ಶ್ರೀಗಳ ಜಿಲ್ಲಾ ನಿರ್ಬಂಧ ಮಾಡುವ ಮೂಲಕ ರಾಜ್ಯದ ಸರ್ಕಾರ ಹಿಂದೂ ವಿರೋಧಿ ನೀತಿ, ಹಿಂದೂ ಸಂತರನ್ನು ದಮನಿಸುವ ಕಾರ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಹಿಂದೂ ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ, ಬಬಲೇಶ್ವದಲ್ಲಿ ಈ ಭಾವದೊಂದಿಗೆ ನಡೆಯುತ್ತಿರುವ ಸಮಾವೇಶಕ್ಕೆ ಪ್ರತಿಯೊಬ್ಬರು ಭಾಗವಹಿಸಬೇಕು, ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕು, ವಿಜಯಪುರದಿಂದ ಬೃಹತ್ ಪ್ರಮಾಣದಲ್ಲಿ ಬೈಕ್ ರ‍್ಯಾಲಿ ನಡೆಯಲಿದ್ದು, ಧರ್ಮ ಒಡೆಯುವ ಕೆಲವು ರಾಜಕಾರಣಿಗಳ ವಿರುದ್ಧ ಜನತೆ ಎಚ್ಚರವಾಗಿರಬೇಕು ಎಂದು ಕರೆ ನೀಡಿದರು. ಎಲ್ಲ ಹಿಂದೂ ಧರ್ಮಿಯರು ಸಮಾಜದ ಐಕ್ಯತೆಗಾಗಿ ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಕೋರಿದರು.
ಪ್ರಮುಖರಾದ ರವಿಕಾಂತ ಬಗಲಿ, ಸಂದೀಪ ಪಾಟೀಲ, ಪ್ರಮುಖರಾದ ಈರಣ್ಣ ರಾವೂರ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ, ಸ್ವಪ್ನ ಕಣಮುಚನಾಳ, ಸಂದೀಪ್ ಪಾಟೀಲ್, ರಾಘು ಕಾಪಸೆ, ಹಣಮಂತ್ರಾಯಗೌಡ ಪಾಟೀಲ, ಸಿದ್ಧಗೊಂಡ ಬಿರಾದಾರ, ರವಿ ವಗ್ಗೆ ಬಿಜೆಪಿ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಅಜೀಜ ಪಠಾಣ.
