ದೇಶದ ಅನ್ನದಾತರ ಬೆನ್ನಲುಬು ಮುರಿದ ಕೇಂದ್ರ ಸರ್ಕಾರ : ಮುಜಾಹಿದ್ ಮರ್ಚೆಡ್

ರಾಯಚೂರು: ಕೇಂದ್ರ ಸರ್ಕಾರ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ರೈತ ವಿರೋಧಿ ಬಜೆಟ್ ಆಗಿದ್ದು, ದೇಶದ ಬೆನ್ನೆಲುಬಾದ ಅನ್ನದಾತರ ಬೆನ್ನೆಲುಬನ್ನೆ ಮುರಿದು ಸಂಕಷ್ಟಕ್ಕೆ ತಳ್ಳುವಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ.) ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಬಜೆಟ್ ನಂತರ ಮಾತನಾಡಿದ ಅವರು, ಆಹಾರ ಧಾನ್ಯ ಸಬ್ಸಿಡಿ ಹಾಗೂ ಗೊಬ್ಬರ ಸಬ್ಸಿಡಿಯಲ್ಲಿ ಕಡಿತ, ಕೃಷಿ ಕ್ಷೇತ್ರಕ್ಕೆ ಅಪರ್ಯಾಪ್ತ ನಿಧಿ ಹಂಚಿಕೆ ಮಾಡಿರುವುದರಿಂದ ರೈತರ ಮೇಲಿನ ಆರ್ಥಿಕ ಒತ್ತಡ ಇನ್ನಷ್ಟು ಹೆಚ್ಚಲಿದೆ. ಗೊಬ್ಬರ ಸಬ್ಸಿಡಿ ಕಡಿತದಿಂದ ನೇರವಾಗಿ ಗೊಬ್ಬರ ಬೆಲೆ ಏರಿಕೆಯ ಆತಂಕ ಎದುರಾಗಿದ್ದು, ಇದು ಸಣ್ಣ ಹಾಗೂ ಅಂಚಿನ ರೈತರ ಬದುಕಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಮುಜಾಹಿದ್ ಮರ್ಚೆಡ್ ಹೇಳಿದರು.
ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ, ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಖಾತರಿ, PM-ಕಿಸಾನ್ ಯೋಜನೆಯಲ್ಲಿ ವಾರ್ಷಿಕ ರೂ.12,000.
00 ನೆರವು ನೀಡುವಂತಹ ಪ್ರಮುಖ ಬೇಡಿಕೆಗಳನ್ನು ಈ ಬಜೆಟ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ತೆಂಗಿನಕಾಯಿ ಯೋಜನೆಯಂತಹ ಸಣ್ಣ ಘೋಷಣೆಗಳು ಕೇವಲ ಕಣ್ಣು ಮುಚ್ಚಿ ಬಾಯಿ ತುಂಬಿಸುವ ಪ್ರಯತ್ನಗಳಷ್ಟೇ ಎಂದು ಅವರು ಟೀಕಿಸಿದರು.
ಈ ಬಜೆಟ್ ರೈತರನ್ನು ಇನ್ನಷ್ಟು ದಾರಿದ್ರ್ಯಕ್ಕೆ ತಳ್ಳುವಂತಿದ್ದು, ಕೇಂದ್ರ ಸರ್ಕಾರ ಈ ರೈತ ವಿರೋಧಿ ಬಜೆಟ್ ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ.) ಒತ್ತಾಯಿಸುತ್ತದೆ. ರೈತರ ಹಕ್ಕುಗಳ ರಕ್ಷಣೆಗಾಗಿ ರಾಜ್ಯದಾದ್ಯಂತ ಜನತೆ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕೆಂದು ಮುಜಾಹಿದ್ ಮರ್ಚೆಡ್ ಅವರು ಕರೆ ನೀಡಿದರು.

error: Content is protected !!